ಮಹಾರಾಷ್ಟ್ರ (ಬುಲ್ಧಾನ) : ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ ಗವಟೆ ಅವರ ಪಾರ್ಥಿವ ಶರೀರವನ್ನು ಬುಲ್ಧಾನ ಜಿಲ್ಲೆಯ ಪಿಂಪಲ್ಗಾಂವ್ ಸರಾಯ್ ಗ್ರಾಮದಲ್ಲಿರುವ ಅವರ ಸ್ವಗೃಹಕ್ಕೆ ಸೋಮವಾರ ತರಲಾಗಿದ್ದು, ಅಂತ್ಯಸಂಸ್ಕಾರ ನಡೆಯಲಿದೆ. ಈಗಾಗಲೇ ಅಂತಿಮ ಸಂಸ್ಕಾರಕ್ಕೆ ಗ್ರಾಮದಲ್ಲಿ ಸಿದ್ಧತೆ ನಡೆದಿದೆ. ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದ ಮೊದಲ ಅಗ್ನಿವೀರ್ ಇವರಾಗಿದ್ದಾರೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಸಾವಿಗೀಡಾಗಿದ್ದರು.
ಇಂದು ಬೆಳಿಗ್ಗೆಯಿಂದಲೇ ಗ್ರಾಮಸ್ಥರು, ವಿದ್ಯಾರ್ಥಿಗಳು, ಸ್ನೇಹಿತರು ಗ್ರಾಮದ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು, ರಂಗೋಲಿ ಬಿಡಿಸಿ, ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ಅಕ್ಷಯ್ ಅವರನ್ನು ಕಳೆದುಕೊಂಡಿರುವುದಕ್ಕೆ ಪೋಷಕರು, ಶಿಕ್ಷಕರು, ಸ್ನೇಹಿತರು ಕಣ್ಣೀರು ಹಾಕಿದರು.
ಮಾಧ್ಯಮದ ಜತೆ ಮಾತನಾಡಿದ ತಂದೆ ಲಕ್ಷ್ಮಣ್ ಗವಟೆ, "ಮಗ ಬಿ.ಕಾಂ ಪಡೆದ ನಂತರ ಸೇನೆಗೆ ಸೇರಬೇಕೆಂದು ಬಯಸಿದ್ದ. ಅಕ್ಟೋಬರ್ 20ರಂದು ಕೊನೇಯದಾಗಿ ಅವನೊಂದಿಗೆ ಮಾತನಾಡಿದ್ದೆ. ಆಗ ನಾನು, ಅವನ ತಮ್ಮ, ಮನೆಯವರೆಲ್ಲರೂ ಚೆನ್ನಾಗಿದ್ದೀರಾ ಎಂದೂ ವಿಚಾರಿಸಿದ್ದ. ಚೆನ್ನಾಗಿದ್ದಾರೆ ಎಂದು ಹೇಳಿ ಆತನನ್ನು ವಿಚಾರಿಸಿಕೊಂಡಿದ್ದೆ. ಆತನೂ ಚೆನ್ನಾಗಿರುವುದಾಗಿ ಹೇಳಿದ್ದ. ಆದರೆ ಈಗ..." ಎಂದು ದುಃಖತಪ್ತರಾದರು.