ನವದೆಹಲಿ:ಅಗ್ನಿಪಥ ಯೋಜನೆ ಅಡಿಶುಕ್ರವಾರದಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಕೇವಲ ಮೂರೇ ಮೂರು ದಿನಗಳಲ್ಲಿ ಬರೋಬ್ಬರಿ 56,960 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆ ಭಾನುವಾರ ತಿಳಿಸಿದೆ.
https://agnipathvayu.cdac.in ನಲ್ಲಿ ಅಗ್ನಿಪಥ್ ನೇಮಕಾತಿ ಅರ್ಜಿ ಪ್ರಕ್ರಿಯೆ ನಡೆದಿದ್ದು ಪ್ರತಿಕ್ರಿಯೆಯಾಗಿ ಭವಿಷ್ಯದ ಅಗ್ನಿವೀರ್‌ಗಳಿಂದ ಇಲ್ಲಿಯವರೆಗೆ ಈ ಪ್ರಮಾಣದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆಯು ತನ್ನ ಟ್ವಿಟರ್‌ನಲ್ಲಿ ತಿಳಿಸಿದೆ. ಜುಲೈ 5 ರಂದು ನೋಂದಣಿ ಮಾಡಿಕೊಳ್ಳುವ ಕೊನೆಯ ದಿನವಾಗಿದೆ ಎಂದು ಸಹ ಅದರಲ್ಲಿ ಉಲ್ಲೇಖ ಮಾಡಿದೆ.
ಅಗ್ನಿಪಥ್ ಯೋಜನೆ 2022 ಮೂಲಕ ಭಾರತೀಯ ವಾಯುಪಡೆಯ ನೇಮಕಾತಿಯು ಅಧಿಕೃತ ಅಧಿಸೂಚನೆಯ ಪ್ರಕಾರ ಈಗಾಗಲೇ (ಜೂನ್ 24) ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅಧಿಕೃತ ವೆಬ್‌ಸೈಟ್ - careerindianairforce.cdac.in ಮೂಲಕ ನೇರವಾಗಿ ಅಗ್ನಿಪಥ್ ಯೋಜನೆ 2022 ಗಾಗಿ ಆನ್‌ಲೈನ್‌ನಲ್ಲಿ ನೋಂದಣಿ ಅರ್ಜಿ ಸಲ್ಲಿಸಬಹುದು.
ಅಗ್ನಿಪಥ್ ಯೋಜನೆ 2022 ರ ಅಡಿ IAF ನೇಮಕಾತಿಗಾಗಿ ನೋಂದಣಿಗಳ ಸೂಚನೆಯ ಪ್ರಕಾರ ಜು.5 ರಂದು ಕೊನೆಗೊಳ್ಳಲಿದ್ದು ಅಗ್ನಿವೀರ್ ಆಗಿ ಅರ್ಹತೆ ಪಡೆಯಲು, ಅರ್ಹತಾ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ ಎಂದು ವಾಯುಪಡೆ ತಿಳಿಸಿದೆ.
ಜೂನ್ 14, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಯುವಕರನ್ನು ಸೇರಿಸಿಕೊಳ್ಳುವ ಈ ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿದ್ದು, ಆಸಕ್ತ ಅಭ್ಯರ್ಥಿಗಳು ಹೊಂದಿರಲೇಬೇಕಾದ ದಾಖಲಾತಿಗಳು ಮತ್ತು ಅಗ್ನಿಪಥ್ ನೇಮಕಾತಿ 2022ರ ಆಯ್ಕೆಯ ಮಾನದಂಡಗಳ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ.
ಹೊಸ ನೀತಿ ಅನ್ವಯ ನೇಮಕ:ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಡಿಯಲ್ಲಿ ಅಗ್ನಿಪಥ್ ಯೋಜನೆಯು ಹೊಸ ಮಾನವ ಸಂಪನ್ಮೂಲ ನೀತಿಯಾಗಿದೆ. 17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಯಲ್ಲಿ ಸೇರಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಅವರಲ್ಲಿ ಶೇ. 25 ರಷ್ಟು ಮುಂದುವರೆಸಿ ಬಾಕಿ ಉಳಿದ ಶೇ. 75ರಷ್ಟು ಅಗ್ನಿಪಥ್ ವೀರರನ್ನು ಕೆಲವು ಜೀವನಾಂಶದ ಭತ್ತೆಯ ಜೊತೆಗೆ ಕೈಬಿಡಲಾಗುವುದು ಎಂದು ಹೇಳಿತ್ತು.
ಆದರೆ, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಗರಿಷ್ಠ ವಯಸ್ಸಿನ ಮಿತಿಯನ್ನು 2022 ಕ್ಕೆ 21 ರಿಂದ 23 ವರ್ಷಗಳಿಗೆ ಹೆಚ್ಚಿಸಿತು. ಇದರ ಜೊತೆಗೆ ರಕ್ಷಣಾ ಸಚಿವಾಲಯ ಮತ್ತು ಅರೆಸೇನಾ ಪಡೆಗಳಲ್ಲಿನ ಖಾಲಿ ಹುದ್ದೆಗಳಲ್ಲಿ 10 ಪ್ರತಿಶತ ಮೀಸಲಾತಿ ಸೇರಿದಂತೆ ಹಲವಾರು ಪ್ರೋತ್ಸಾಹಕಗಳನ್ನು ಕೇಂದ್ರವು ಪ್ರಕಟಿಸಿತು.
ಆದಾಗ್ಯೂ, ನೇಮಕಾತಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಇದರರಲ್ಲಿ ತೊಡಗಿರುವವರನ್ನು ಸೇನೆಗೆ ಸೇರ್ಪಡೆಗೊಳಿಸಲಾಗುವುದಿಲ್ಲ ಎಂದು ಸಶಸ್ತ್ರ ಪಡೆಗಳು ಸ್ಪಷ್ಟಪಡಿಸಿದೆ. ಅಲ್ಪಾವಧಿಯ ಒಪ್ಪಂದದ ಅಗ್ನಿಪಥ ಯೋಜನೆಯ ಮೂಲಕ ಅರ್ಜಿ ಸಲ್ಲಿಸಲು ಸಿದ್ಧರಿರುವ ಆಕಾಂಕ್ಷಿಗಳು ಯೋಜನೆಯ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾಗಿಲ್ಲ ಎಂದು ಲಿಖಿತ ಪ್ರತಿಜ್ಞಾ ಪತ್ರ ಸಲ್ಲಿಸುವುದು ಸಹ ಕಡ್ಡಾಯವಾಗಿದೆ.