ದೆಹಲಿ/ಹರಿಯಾಣ/ಬಿಹಾರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ಮುಂದುವರೆದಿದ್ದು, ಹಿಂಸಾಸ್ವರೂಪ ಪಡೆದಿದೆ. ಅನೇಕ ಕಡೆಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಭಾರಿ ಪ್ರಮಾಣದ ಹಾನಿ ಉಂಟು ಮಾಡಲಾಗುತ್ತಿದೆ. ವಿವಾದ ಕೊನೆಗಾಣಿಸುವ ನಿಟ್ಟಿನಲ್ಲಿ ಯೋಜನೆಯ ಬಗ್ಗೆ ಮನವರಿಕೆ ಮಾಡುವ ಕಾರ್ಯದಲ್ಲಿ ಸರ್ಕಾರ ಮತ್ತು ಸೇನಾಧಿಕಾರಿಗಳು ನಿರತರಾಗಿದ್ದಾರೆ.
1. ಬಿಹಾರದ ಡಿಸಿಎಂ ಮನೆ ಮೇಲೆ ದಾಳಿ:ಬಿಹಾರದ ಉಪ ಮುಖ್ಯಮಂತ್ರಿ ರೇಣು ದೇವಿ ಮತ್ತು ಬಿಜೆಪಿ ಅಧ್ಯಕ್ಷ ಮತ್ತು ಪಶ್ಚಿಮ ಚಂಪಾರಣ್ ಸಂಸದ ಸಂಜಯ್ ಜೈಸ್ವಾಲ್ ಅವರ ನಿವಾಸಗಳ ಮೇಲೆ ಪ್ರತಿಭಟನಾನಿರತರು ಕಲ್ಲು ತೂರಿ ದಾಳಿ ನಡೆಸಿದರು. ಬಿಜೆಪಿ ಶಾಸಕ ವಿನಯ್ ಬಿಹಾರಿ ಅವರು ಕಾರಿಗೆ ಬೆಂಕಿ ಹಚ್ಚಿದ್ದಾರೆ.
2. ಹರಿಯಾಣದಲ್ಲಿ ಇಂಟರ್ನೆಟ್ ಸ್ಥಗಿತ: ಹರಿಯಾಣದಲ್ಲೂ ಪ್ರತಿಭಟನೆ ಭುಗಿಲೆದ್ದಿತು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಇಂಟರ್ನೆಟ್ ಸೇವೆಯನ್ನು ಕಡಿತಗೊಳಿಸಿದೆ. ಎಲ್ಲ ಎಸ್ಎಂಎಸ್ ಸೇವೆಯನ್ನೂ ನಿರ್ಬಂಧಿಸಲಾಗಿದೆ. ಮುಂದಿನ 24 ಗಂಟೆಗಳ ಕಾಲವೂ ಈ ಸೇವೆಗಳು ರದ್ದಾಗಿರಲಿವೆ.
3. 19 ಎಫ್ಐಆರ್ ದಾಖಲು: ದೆಹಲಿಯಲ್ಲಿ ಪ್ರತಿಭಟನಾಕಾರರು ಮತ್ತು ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪಗಳ ಸಂಬಂಧ ಪೊಲೀಸರು 19 ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕೆಲ ದೂರುಗಳು ಮತ್ತು ಸಾಮಾಜಿಕ ಜಾಲತಾಣಗಳ ದೃಶ್ಯಗಳ ಆಧಾರದ ಮೇಲೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇದರಲ್ಲಿ ಕೆಲ ಸಾಮಾಜಿಕ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೋಮು ಸೌಹಾರ್ದತೆಗೆ ಭಂಗ ತರುವಂತಹ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4. ಶಾಲಾ ಬಸ್‌ನಲ್ಲಿ ಮಕ್ಕಳ ಕಣ್ಣೀರು:ಬಿಹಾರದ ದರ್ಭಾಂಗ್ನಲ್ಲಿ ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಪ್ರತಿಭಟನೆಗಳ ಮಧ್ಯೆ ಶಾಲಾ ಬಸ್ಸಿಲುಕಿ, ಅಲ್ಲಿನ ಪರಿಸ್ಥಿತಿಯನ್ನು ಕಂಡು ಮಕ್ಕಳು ಭಯದಿಂದ ಕಣ್ಣೀರು ಹಾಕಿದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ಶಾಲಾ ಬಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟರು.
ಶಾಂತವಾಗದ 'ಅಗ್ನಿ'ಪಥ ವಿವಾದ: ಬಿಹಾರದ ಡಿಸಿಎಂ ಮನೆ ಮೇಲೆ ದಾಳಿ, ಹರಿಯಾಣದಲ್ಲಿ ಇಂಟರ್ನೆಟ್ ಸ್ಥಗಿತ 5. 72 ರೈಲುಗಳ ಸಂಚಾರ ರದ್ದು: ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಡೆದ ಹಿಂಸಾಚಾರದ ನಂತರ 72 ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಜೊತೆಗೆ 12 ರೈಲುಗಳ ಮಾರ್ಗವನ್ನು ರೈಲ್ವೇ ಇಲಾಖೆ ಬದಲಾಯಿಸಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ದೇಶಾದ್ಯಂತ ಸುಮಾರು 200 ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.
6. ರೈಲ್ವೆ ಸಚಿವರ ಮನವಿ: ಪ್ರತಿಭಟನಾಕಾರರು ರೈಲ್ವೆ ಆಸ್ತಿ-ಪಾಸ್ತಿಗಳನ್ನೇ ಗುರಿಯಾಗಿಕೊಂಡು ಹಾನಿ ಮಾಡುತ್ತಿದ್ದಾರೆ. ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮಾತನಾಡಿ, ಹಿಂಸಾತ್ಮಕ ಪ್ರತಿಭಟನೆಯಲ್ಲಿ ಯುವಕರು ಪಾಲ್ಗೊಳ್ಳಬಾರದು ಮತ್ತು ರೈಲ್ವೆ ಆಸ್ತಿಗಳಿಗೆ ಹಾನಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ರೈಲ್ವೆ ಈ ದೇಶದ ಆಸ್ತಿಯಾಗಿದೆ ಎಂದು ಹೇಳಿದ್ದಾರೆ.
7. ಯೋಧರಿಗೆ ವಿವರಣೆ ನೀಡಿದಏರ್ ಚೀಫ್ ಮಾರ್ಷಲ್: ಅಗ್ನಿಪಥ ಯೋಜನೆ ಬಗ್ಗೆ ಯೋಧರಲ್ಲಿ ಗೊಂದಲಕ್ಕೆ ಕಾರಣವಾಗಬಾರದು. ಆದ್ದರಿಂದ ಯೋಧರಿಗೂ ಯೋಜನೆ ಕುರಿತಂತೆ ಸೇನಾಧಿಕಾರಿಗಳು ವಿವರಿಸಿ ಮನವರಿಕೆ ಮಾಡಿಸಲಾಗುತ್ತಿದೆ. ಇಂದು ವಾಯು ಸೇನೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ, ಪಂಜಾಬ್ನ ಹಲ್ವಾರಾ ಏರ್ ಬೇಸ್ಗೆ ಭೇಟಿ ನೀಡಿ, ಸೈನಿಕರಿಗೆ ಮಾಹಿತಿ ನೀಡಿದ್ದಾರೆ.
ಭಾರತದ ಭೂಸೇನೆ, ವಾಯುಸೇನೆ ಹಾಗು ನೌಕಾದಳದ ಮುಖ್ಯಸ್ಥರು 8. "ಇದೊಂದು ಶ್ರೇಷ್ಠ ಅವಕಾಶ"-ನೌಕಾಪಡೆಯ ಮುಖ್ಯಸ್ಥರು: ಅಗ್ನಿಪಥ ಯೋಜನೆಯು ದೇಶ ಸೇವೆ ಮಾಡುವ ಯುವಕರಿಗೆ ಶ್ರೇಷ್ಠ ಅವಕಾಶವಾಗಿದೆ. ಯೋಜನೆಯನ್ನು ಶಾಂತಿಯಿಂದ ಅರ್ಥ ಮಾಡಿಕೊಳ್ಳಬೇಕು. ಯಾವುದೇ ನಾಗರಿಕರು ಪ್ರತಿಭಟನೆ ಅಥವಾ ಹಿಂಸಾಚಾರದಲ್ಲಿ ತೊಡಬಾರದು ಎಂದು ನೌಕಾಪಡೆಯ ಮುಖ್ಯಸ್ಥ ಆರ್.ಹರಿಕುಮಾರ್ ಮನವಿ ಮಾಡಿದ್ದಾರೆ.
9. "ಪ್ರತಿಯೊಬ್ಬರಿಗೂ ಪ್ರಯೋಜನ"-ಭೂ ಸೇನಾ ಮುಖ್ಯಸ್ಥರು:ಅಗ್ನಿಪಥ ಯೋಜನೆಯ ಸಂಪೂರ್ಣ ಮಾಹಿತಿ ಯುವಕರಿಗಿಲ್ಲ ಎಂದು ಭಾವಿಸುತ್ತೇನೆ. ಒಮ್ಮೆ ಅವರು ಯೋಜನೆಯ ಬಗ್ಗೆ ತಿಳಿದುಕೊಂಡರೆ, ಈ ಯೋಜನೆಯು ಯುವಕರಿಗೆ ಮಾತ್ರವಲ್ಲ, ಎಲ್ಲರಿಗೂ ಪ್ರಯೋಜನಕಾರಿಯಾಗಿದೆ ಎಂದು ತಿಳಿಯುತ್ತದೆ ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ:ಸಿಕಂದ್ರಾಬಾದ್ನಲ್ಲಿ ರೈಲಿಗೆ ಬೆಂಕಿ, ಗಾಳಿಯಲ್ಲಿ ಗುಂಡು... ಯುವಕ ಸಾವು