ಜಲ್ಪೈಗುರಿ (ಪಶ್ಚಿಮ ಬಂಗಾಳ):ಕಳೆದ 15 ದಿನಗಳ ಅವಧಿಯಲ್ಲಿ ಮೂರು ಪಾರಿಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಇದೀಗ ಇಂದು ಬೆಳಗ್ಗೆ ಮತ್ತೆ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಕಾಲುಗಳಲ್ಲಿ ವಿಚಿತ್ರ ಕೋಡ್ಗಳು, ಸಂಖ್ಯೆ ಹಾಗೂ ಕ್ಯಾಮರಾಗಳಿದ್ದ ಪಾರಿವಾಳ ಸಿಕ್ಕಿದೆ. ಕಾಲಲ್ಲಿ ಸಾಧನಗಳು ಕಂಡು ಬಂದ ಹಿನ್ನೆಲೆ ಸ್ಥಳೀಯರಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿವೆ. ದೀರ್ಘ ಕಾಲ ಹಾರಬಲ್ಲ ಪಾರಿವಾಳಗಳನ್ನು ಬೇಹುಗಾರಿಕೆಗೆ ಬಳಸಿರಬಹುದಾ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ.
ಮಂಗಳವಾರ ಬೆಳಗ್ಗೆ ಜಲ್ಪೈಗುರಿ ಸದರ್ ಬ್ಲಾಕ್ನ ಪ್ರಧಾನಪಾರಾದಲ್ಲಿ ದಿನಸಿ ಅಂಗಡಿಯೊಂದರ ಮೇಲ್ಭಾಗದಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದ ಪಾರಿವಾಳವನ್ನು ಅಲ್ಲಿನ ನಿವಾಸಿಗಳು ಗಮನಿಸಿದ್ದಾರೆ. ದಿನಸಿ ಅಂಗಡಿಯ ಮಾಲೀಕರಾದ ದುಲಾಲ್ ಸರ್ಕಾರ್ ಪಕ್ಷಿಯನ್ನು ಹಿಡಿದು ರಕ್ಷಿಸಿದ್ದು, ಆ ವೇಳೆ ಅದರ ಕಾಲಿನ ಮೇಲೆ ಫೋನ್ ಸಂಖ್ಯ ಬರೆದಿದ್ದ ಉಂಗುರ ಆಕಾರದ ಸಾಧನವನ್ನು ಗಮನಿಸಿದ್ದಾರೆ.
ಆ ಫೋನ್ ಸಂಖ್ಯೆ ಹಿಮಾಚಲ ಪ್ರದೇಶದ ಎಂ ಡಿ ಅಕ್ಬರ್ ಎನ್ನುವವರಿಗೆ ಸೇರಿದ್ದಾಗಿದ್ದು, ಅವರಿಗೂ ಆ ಪ್ರದೇಶಕ್ಕೂ ಯಾವುದೇ ಸಂಪರ್ಕ ಇಲ್ಲ. ಹಾಗಾಗಿ, ಗಿರಿರಾಜ ಜಾತಿಯ ಪಾರಿವಾಳಗಳನ್ನು ಒಂದು ಕಾಲದಲ್ಲಿ ಗೂಢಾಚಾರರಾಗಿ ಬಳಸಲಾಗುತ್ತಿದ್ದು, ಈ ಪಾರಿವಾಳವನ್ನು ಕೂಡ ಮಾಹಿತಿ ಕಳ್ಳಸಾಗಣೆಗಾಗಿ ಬಳಸಿರಬಹುದು ಎಂಬ ಶಂಕೆ ಸ್ಥಳೀಯರಲ್ಲಿ ಮೂಡಿದೆ.
ಅಲ್ಲಿನ ಸ್ಥಳೀಯ ನಿವಾಸಿ ಪರಿಮಳ್ ಬಿಸ್ವಾಸ್ ಎನ್ನುವವರು ಮಾಧ್ಯಮದೊಂದಿಗೆ ಮಾತನಾಡಿದ್ದು, ಅನುಮಾನ ಹುಟ್ಟುಹಾಕುವ ರೀತಿಯಲ್ಲಿ ಕಾಲಲ್ಲಿ ಕ್ಯಾಮರಾ, ಸಂಖ್ಯೆಗಳನ್ನು ಹೊಂದಿರುವ ಪಾರಿವಾಳ ಸಿಕ್ಕಿರುವ ಕುರಿತು ನಾವು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪಾರಿವಾಳವನ್ನು ನಮ್ಮ ಬಳಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ನಾವು ಅದನ್ನು ಮುಕ್ತವಾಗಿ ಹಾರಲು ಬಿಟ್ಟಿದ್ದೇವೆ. ಪಾರಿವಾಳದ ಕಾಲಲ್ಲಿರುವ ಸಂಖ್ಯೆ ಹಿಮಾಚಲ ಪ್ರದೇಶದ್ದು. ಆದರೆ ಈ ಪಾರಿವಾಳ ಸುಮಾರು 1500 ಕಿ. ಮೀ ಹಾರಿ ಇಲ್ಲಿಗೆ ಹೇಗೆ ಬಂತು ಎಂಬುದು ನಮಗೆ ಗೊತ್ತಿಲ್ಲ. ಪಾರಿವಾಳ ಗಾಯಗೊಂಡಿದ್ದ ಕಾರಣ ಬೇರೆಲ್ಲೂ ಹೋಗದೆ ಅಂಗಡಿಯ ಸುತ್ತಮುತ್ತ ಅಷ್ಟೇ ಹಾರಾಡುತ್ತಿದೆ. ಆದರೆ ಇದು ಹೀಗೆಯೇ ಇಲ್ಲೇ ಎಷ್ಟು ದಿನ ಇಲ್ಲಿ ಹಾರಾಡಿಕೊಂಡು ಇರುತ್ತದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಪಾರಿವಾಳ ಸಿಕ್ಕಿರುವ ಬಗ್ಗೆ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ಮಾತನಾಡಿ, ನಾವು ಪಕ್ಷಿಯ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ನಾವು ಹೆಚ್ಚಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪಾರಿವಾಳ ಪತ್ತೆ ಇದೇ ಮೊದಲಲ್ಲ: ಈ ರೀತಿ ಅನುಮಾನಾಸ್ಪದ ರೀತಿಯಲ್ಲಿ ಪಾರಿವಾಳ ಸಿಕ್ಕಿರುವುದು ಇದೇ ಮೊದಲಲ್ಲ. ವಾರದ ಹಿಂದೆ ಪುರಿಯಲ್ಲಿಯೂ ಇದೇ ರೀತಿ ಕಾಲುಗಳಲ್ಲಿ ಕಾಗದ ಸ್ಟಿಕ್ಕರ್ ಅಂಟಿಸಿದ್ದ ಪಾರಿವಾಳ ಪತ್ತೆಯಾಗಿತ್ತು. ಸರಳವಾಗಿ ಕಾಣುತ್ತಿದ್ದ ಬೂದು ಬಣ್ಣದ ಪಾರಿವಾಳದ ಕಾಲುಗಳಿಗೆ ಎರಡು ಗೋಲ್ಡನ್ ಮತ್ತು ಬಿಳಿ ಬಣ್ಣದ ಸ್ಟಿಕ್ಕರ್ಗಳನ್ನು ಅಂಟಿಸಲಾಗಿತ್ತು. ಬಿಳಿ ಬಣ್ಣದ ಟ್ಯಾಗ್‌ನಲ್ಲಿ '31' ಎಂದು ಬರೆಯಲಾಗಿತ್ತು. ಗೋಲ್ಡನ್ ಟ್ಯಾಗ್‌ನಲ್ಲಿ ಇಂಗ್ಲಿಷ್ ಅಕ್ಷರದಲ್ಲಿ 'ರೆಡ್ಡಿ ವಿಎಸ್‌ಪಿ ಡಿಎನ್' ಎಂದು ಬರೆಯಲಾಗಿತ್ತು. ಎರಡೂ ಕೋಡೆಡ್ ಸಂದೇಶಗಳ ಅರ್ಥವನ್ನು ಬಗೆಹರಿಸಲಾಗಿಲ್ಲ.
ಈ ಪಾರಿವಾಳ ಪತ್ತೆಯಾಗುವ ಒಂದು ವಾರದ ಮೊದಲು ಮಾರ್ಚ್ 8 ರಂದು ಒಡಿಶಾದ ಜಗತ್ಸಿಂಗ್ಪುರ ಜಿಲ್ಲೆಯ ಪರದೀಪ್ ಕರಾವಳಿಯ ಸಾರಥಿ ಎಂಬ ದೋಣಿಯ ಮೀನುಗಾರರು ಕ್ಯಾಮರಾ ಹಾಗೂ ಕಾಲಿಗೆ ಚಿಪ್ ಅಳವಡಿಸಿದ್ದ ಪಾರಿವಾಳವನ್ನು ಹಿಡಿದಿದ್ದರು. ಆ ಪಾರಿವಾಳದ ಚರ್ಮದ ಮೇಲೆ ಉರ್ದು ಹಾಗೂ ಚೈನೀಸ್ ಭಾಷೆಯಲ್ಲಿ ಸಾಂಕೇತಿಕ ಸಂದೇಶಗಳನ್ನು ಕೂಡ ಬರೆಯಲಾಗಿತ್ತು. ಪಾರಿವಾಳ ಪತ್ತೆಯಾಗಿರುವ ಕುರಿತು ಮೀನುಗಾರರು ಮೆರೈನ್ ಪೊಲೀಸ್ ಠಾಣೆಗೆ ತಿಳಿಸಿದ್ದು, ನಂತರ ಪೊಲೀಸರು ಪಕ್ಷಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಅದರ ರೆಕ್ಕೆಗಳ ಮೇಲೆ ವಿದೇಶಿ ಭಾಷೆಯ ಟ್ಯಾಗ್ ಕೂಡ ಕಂಡುಬಂದಿದ್ದು, ಪಕ್ಷಿಯನ್ನು ಬೇಹುಗಾರಿಕೆ ಉದ್ದೇಶಗಳಿಗಾಗಿ ಬಳಸಲಾಗಿರಬಹುದು ಎಂದು ಶಂಕಿಸಲಾಗಿತ್ತು.
ತನಿಖೆ ಪ್ರಾರಂಭಿಸಿದ್ದ ಪೊಲೀಸರು, ಕ್ಯಾಮರಾವನ್ನು ಬೇಹುಗಾರಿಕೆಗೆ ಬಳಸಲಾಗಿದೆಯೇ, ಆ ಪಾರಿವಾಳ ಎಲ್ಲಿಂದ ಬಂದಿವೆ ಎನ್ನುವುದನ್ನು ಪತ್ತೆಹಚ್ಚಲು ಕ್ಯಾಮೆರಾ, ಚಿಪ್ ಮತ್ತು ಟ್ಯಾಗ್ ಅನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ ಇದುವರೆಗೆ ಈ ಪ್ರಕರಣದಲ್ಲಿ ಬೆಳವಣಿಗೆ ವರದಿಯಾಗಿಲ್ಲ. ಆದರೆ ಇದೀಗ ಮತ್ತೆ ಅದೇ ರೀತಿ ಸಾಧನಗಳನ್ನು ಅಂಟಿಸಿರುವ ಪಾರಿವಾಳ ಪತ್ತೆಯಾಗಿದ್ದು, ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಇದನ್ನೂ ಓದಿ:ಕ್ಯಾಮರಾ, ಮೈಕ್ರೋಚಿಪ್ ಅಳವಡಿಸಿರುವ ಪಾರಿವಾಳ ಪತ್ತೆ!