ನವದೆಹಲಿ: ಗುಜರಾತ್‌ನಲ್ಲಿ ಬುಡಕಟ್ಟು ಜನಾಂಗದವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ, ರಾಹುಲ್ ಗಾಂಧಿ ಇತ್ತೀಚೆಗೆ ಸತ್ಯಾಗ್ರಹ ನಡೆಸಿದ್ದರು. ಇದೀಗ ರಾಹುಲ್ ಗಾಂಧಿ ಇಲ್ಲಿನ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಇದೇ ರೀತಿಯ ದಾಖಲೆ ನೀಡುವಂತೆ ರಾಜ್ಯ ನಾಯಕರಿಗೆ ಆಗ್ರಹಿಸಿದ್ದಾರೆ.
ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿರುವ ಗುಜರಾತ್‌ನಲ್ಲಿ, ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಗುಜರಾತ್‌ನಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್ ಭಾರಿ ಕಸರತ್ತು ಮಾಡುತ್ತಿದೆ.
ರಾಹುಲ್ ಗಾಂಧಿ ಮೇ.10 ರಂದು ದಾಹೋದ್‌ನಲ್ಲಿ ಆದಿವಾಸಿಗಳಿಗೆ ಹಕ್ಕಪತ್ರ ನೀಡಬೇಕು ಎಂದು ಆಗ್ರಹಿಸಿ, ಸತ್ಯಾಗ್ರಹ ನಡೆಸಿದ್ದರು. ಇದೇ ವೇಳೆ, ಅಲ್ಲಿನ ಅರಣ್ಯವಾಸಿಗಳ ಜಲ, ಕಾಡು ಮತ್ತು ಜಮೀನು (ನೀರು, ಅರಣ್ಯ ಮತ್ತು ಭೂ ಸಂಪನ್ಮೂಲ) ರಕ್ಷಿಸುವ ಭರವಸೆ ನೀಡಿದ್ದರು. ಇದೀಗ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಇದೇ ಹಕ್ಕಪತ್ರಗಳನ್ನು ನೀಡುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಮುಂದಿನ ಹೋರಾಟದ ಕುರಿತು ಚರ್ಚೆ:ನಾವು ಗುಜರಾತ್‌ನಲ್ಲಿ ಅಳಿವಿನಂಚಿನಲ್ಲಿರುವ ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಅವರ ಸಮಸ್ಯೆಗಳನ್ನು ಪರಿಹರಿಸುವ ದಾಖಲೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ರಾಜು ಹೇಳಿದರು. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಗುಂಪುಗಳ ಎಐಸಿಸಿ ರಾಷ್ಟ್ರೀಯ ಸಂಯೋಜಕರಾಗಿರುವ ರಾಜು ಅವರು ಗುರುವಾರ ಅಹಮದಾಬಾದ್‌ನಲ್ಲಿ ವಿವಿಧ ಸಮುದಾಯದ ಮುಖಂಡರೊಂದಿಗೆ ಈ ವಿಷಯದ ಬಗ್ಗೆ ವಿವರವಾಗಿ ಚರ್ಚೆ ನಡೆಸಿದರು.