ನವದೆಹಲಿ:ರಾಜಸ್ಥಾನ ಕಾಂಗ್ರೆಸ್ನಲ್ಲಿನ ಬಂಡಾಯದ ವಿರುದ್ಧ ಸೋನಿಯಾ ಗಾಂಧಿ ಕಠಿಣ ನಿಲುವು ತಳೆದಿರುವುದರಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಕ್ಕೆ ನಿಂತಿದ್ದ ಶಾಸಕರು ಒಬ್ಬೊಬ್ಬರಾಗಿ ದೂರಾಗುತ್ತಿದ್ದಾರೆ. ಹೀಗಾಗಿ ಗೆಹ್ಲೋಟ್ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಗಳು ಕಾಣಿಸುತ್ತಿವೆ.
ಕಾಂಗ್ರೆಸ್ ಅಧ್ಯಕ್ಷರ ಕಠಿಣ ನಿಲುವು ಫಲ ನೀಡುತ್ತಿದೆ. ಬಂಡಾಯ ಶಾಸಕರು ತಣ್ಣಗಾಗುತ್ತಿದ್ದಾರೆ. ಅವರಲ್ಲಿ ಬಹುತೇಕರು ಎಐಸಿಸಿ ಆದೇಶ ಪಾಲನೆಗೆ ತಯಾರಾಗಿದ್ದಾರೆ. ಎಷ್ಟೇ ಆದರೂ ಅವರು ಪಕ್ಷದ ಶಾಸಕರು ಎಂದು ಈ ಘಟನೆಗಳನ್ನು ಹತ್ತಿರದಿಂದ ಬಲ್ಲ ಹಾಗೂ ಇದನ್ನು ನಿರ್ವಹಿಸುತ್ತಿರುವ ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಧಾರಿವಾಲ್ ಯೂ ಟರ್ನ್:ಗೆಹ್ಲೋಟ್ ಅವರ ಪರಮ ನಂಬಿಕಸ್ಥ ಮತ್ತು ಹಿರಿಯ ಸಚಿವ ಶಾಂತಿ ಧಾರಿವಾಲ್ ಯೂ ಟರ್ನ್ ಹೊಡೆದ ನಂತರ, ಸೋನಿಯಾ ಗಾಂಧಿ ಆದೇಶದ ಮೇರೆಗೆ ಪ್ಲ್ಯಾನ್-ಬಿ ಮೇಲೆ ಪಕ್ಷದ ನಿರ್ವಾಹಕರು ಕೆಲಸ ಮಾಡುತ್ತಿದ್ದು, ಗೆಹ್ಲೋಟ್ ಬದಲಿಗೆ ಮುಂದಿನ ಪಕ್ಷಾಧ್ಯಕ್ಷ ಅಭ್ಯರ್ಥಿ ಹಾಗೂ ರಾಜ್ಯದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹುಡುಕಲಾಗುತ್ತಿದೆ.
ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸುವ ಎಐಸಿಸಿ ಕ್ರಮಕ್ಕೆ ಯಾವುದೇ ಕಾರಣಕ್ಕೂ ಬೆಂಬಲ ನೀಡದಂತೆ ಭಾನುವಾರದವರೆಗೂ ಕೂಗಾಡುತ್ತಿದ್ದ ಧಾರಿವಾಲ್, ಸದ್ಯ ಸಂಪೂರ್ಣ ತಣ್ಣಗಾಗಿದ್ದಾರೆ. ಈಗಿನ ಬಂಡಾಯದ ಸ್ಥಿತಿ ಕ್ರಮೇಣ ಕರಗಲಿದೆ ಮತ್ತು ಸೋನಿಯಾ ಗಾಂಧಿಯವರ ಮಾತಿನಂತೆ ನಡೆಯಲಿದ್ದೇವೆ ಎಂದು ಈಗ ಅವರು ಹೇಳಲಾರಂಭಿಸಿದ್ದಾರೆ.
ಬಂಡಾಯ ನಾಯಕ ತನ್ನ ನಿಲುವನ್ನು ಇಷ್ಟು ಬೇಗ ಬದಲಾಯಿಸಿದರೆ, ಇತರರು ಅದನ್ನು ಅನುಸರಿಸುತ್ತಾರೆ. ಎಷ್ಟೇ ಆದರೂ ಅವರು ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಆಯ್ಕೆಯಾದವರು. ಅಲ್ಲದೇ, ಎಲ್ಲರೂ ಸಚಿನ್ ಪೈಲಟ್ ಬಗ್ಗೆ ಮಾತನಾಡುವಾಗ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯಾಗುವಂತೆ ಕೇಳಿದ್ದು ಸೋನಿಯಾ ಗಾಂಧಿ ಎಂದು ಅವರು ನೆನಪಿಸಿಕೊಳ್ಳುತ್ತಾರೆ ಎಂದು ರಾಜಸ್ಥಾನದ ಬಿಕ್ಕಟ್ಟು ನಿರ್ವಹಣೆಯ ಮೇಲ್ವಿಚಾರಣೆಯ ಸಿಡಬ್ಲ್ಯೂಸಿ ಸದಸ್ಯರೊಬ್ಬರು ಹೇಳಿದರು.