ಚಂಡೀಗಢ (ಪಂಜಾಬ್): ಪಂಜಾಬಿ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಬಂಧಿತ ಇಬ್ಬರ ಗ್ಯಾಂಗ್ಸ್ಟರ್ಗಳ ಕೊಲೆಗೆ ಸಂಬಂಧಿಸಿದಂತೆ ಬೆಚ್ಚಿಬೀಳಿಸುವ ವಿಡಿಯೋಗಳು ಹೊರ ಬಿದ್ದಿವೆ. ಜೈಲಿನಲ್ಲೇ ಇಬ್ಬರನ್ನು ಹತ್ಯೆ ಮಾಡಿದ ನಂತರ ಸಹ ಕೈದಿಗಳು ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಾರಾಗೃಹ ಇಲಾಖೆಯ ಅಧಿಕಾರಿಗಳ ಕರ್ತವ್ಯದ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ವಾಗ್ದಾಳಿ ನಡೆಸಿದೆ.
ಪ್ರಸಿದ್ಧ ಗಾಯಕ, ಕಾಂಗ್ರೆಸ್ ಮುಖಂಡರಾಗಿದ್ದ ಸಿಧು ಮೂಸೆವಾಲಾ ಅವರನ್ನು ಕಳೆದ ವರ್ಷ ಮೇ 29ರಂದು ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಗ್ಯಾಂಗ್ಸ್ಟರ್ಗಳನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಇದರ ನಡುವೆ ಫೆಬ್ರವರಿ 26ರಂದು ಮಧ್ಯಾಹ್ನ ಪಂಜಾಬ್ನ ಗೋಯಿಂಡ್ವಾಲ್ ಸಾಹಿಬ್ ಸೆಂಟ್ರಲ್ ಜೈಲಿನಲ್ಲೇ ಬಂಧಿತ ಗ್ಯಾಂಗ್ಸ್ಟರ್ಗಳ ನಡುವೆ ವಾರ್ ನಡೆದಿತ್ತು. ಈ ಗ್ಯಾಂಗ್ ವಾರ್ನಲ್ಲಿ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಮೋಹನ್ಸಿಂಗ್ ಮೋಹನ ಮತ್ತು ಮನದೀಪ್ ತೋಫಾನ್ನನ್ನು ಹೊಡೆದು ಕೊಲೆ ಮಾಡಲಾಗಿತ್ತು. ಅಲ್ಲದೇ, ಕೇಶವ್ ಎಂಬ ಮತ್ತೋರ್ವ ಗ್ಯಾಂಗ್ಸ್ಟರ್ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.
ಹಂತಕರ ಸಂಭ್ರಮಾಚರಣೆ ವಿಡಿಯೋಗಳು ಬಹಿರಂಗ:ಸೆಂಟ್ರಲ್ ಜೈಲಿನಲ್ಲೇ ಗ್ಯಾಂಗ್ ವಾರ್ ನಡೆದು ಇಬ್ಬರು ಹತ್ಯೆಯಾದ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಕೊಲೆಗಳ ನಂತರ ಮತ್ತೊಂದು ಗುಂಪಿನ ಕೈದಿ ಗ್ಯಾಂಗ್ಸ್ಟರ್ಗಳು ಸಂಭ್ರಮಾಚರಣೆ ಮಾಡಿರುವ ವಿಡಿಯೋಗಳು ಬಹಿರಂಗವಾಗಿವೆ. ಜೈಲಿನಲ್ಲೇ ಹಂತಕರು ಮೊಬೈಲ್ ಹಿಡಿದುಕೊಂಡು ವಿಡಿಯೋದಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ. ತಮ್ಮ ಸಹೋದರನ ಕೊಂದಿದ್ದವರ ವಿರುದ್ಧ ಸೇಡು ತೀರಿಸಿಕೊಂಡಿದ್ದೇವೆ ಎಂದು ಕೈದಿಯೋರ್ವ ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲ, ಗ್ಯಾಂಗ್ಸ್ಟರ್ ಜಗ್ಗು ಭಗವಾನ್‌ಪುರಿಯನ್ನು ತಮ್ಮ ಅಪ್ಪ ಎಂದು ತಿಳಿದುಕೊಂಡಿದ್ದ ಇಬ್ಬರನ್ನೂ ಜೈಲಿನಲ್ಲೇ ಕೊಲೆ ಮಾಡಿದ್ದೇವೆ ಎಂದೂ ಹಂತಕರು ಹೇಳಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕೂಡ ಈ ದೃಶ್ಯದಲ್ಲಿ ದಾಖಲಾಗಿದೆ.