ಗಾಂಧಿನಗರ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಿನಿಂದಲೇ ಗುಜರಾತ್‌ನಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ರಾಜಕೀಯ ಕಾವು ಬಿಸಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನಲ್ಲಿ ಬಿಎಸ್ಪಿ, ಎಐಎಂಐಎಂ ಮತ್ತು ಇತ್ತೀಚೆಗೆ ಆಮ್ ಆದ್ಮಿ ಪಕ್ಷ (ಎಪಿಪಿ) ಪಕ್ಷಗಳು ಪ್ರವೇಶ ಪಡೆದಿದ್ದವು. ಈಗ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಕೂಡ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುತ್ತಿದೆ.
ಹೌದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹುತಾತ್ಮರ ದಿನ (ಜುಲೈ 21) ರಂದು ಟಿಎಂಸಿ ಪಕ್ಷವನ್ನು ದೇಶಾದ್ಯಂತ ಸ್ಥಾಪಿಸುವ ಕುರಿತಾದ ಯೋಜನೆಗಳನ್ನು ಅನಾವರಣಗೊಳಿಸಲಾಗಿತ್ತು. ಪ.ಬಂಗಾಳಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದ ಮಮತಾ ಅವರ ಭಾಷಣವನ್ನು ಬುಧವಾರ ದೇಶದ ವಿವಿಧ ರಾಜ್ಯಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ದಿಲ್ಲಿ, ತಮಿಳುನಾಡು, ಪಂಜಾಬ್, ತ್ರಿಪುರಾ ಹಾಗೂ ವರ್ಷಾಂತ್ಯಕ್ಕೆ ಚುನಾವಣೆ ಎದುರಿಸಲಿರುವ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲೂ ಲೈವ್ ಟೆಲಿಕಾಸ್ಟ್ ಮಾಡಲಾಯಿತು.