ಜಮ್ಮು:ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ತೆಗೆದು ಹಾಕಿದ ನಂತರ ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬರೂ ಪ್ರಜಾಪ್ರಭುತ್ವವನ್ನು ಅನುಭವಿಸುವಂತಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಜಮ್ಮುವಿನ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ 83ನೇ ಸಿಆರ್ಪಿಎಫ್ ರೈಸಿಂಗ್ ದಿನದ ಪರೇಡ್ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅಮಿತ್ ಶಾ, ಆರ್ಟಿಕಲ್ 370ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರದ ಮುಖ್ಯಸ್ಥರನ್ನು 'ವಜೀರ್-ಎ-ಅಜಮ್' (ಪ್ರಧಾನಿ) ಎಂದು ಕರೆಯಲಾಗುತ್ತಿತ್ತು.
ರಾಜ್ಯ ತನ್ನದೇ ಆದ ಧ್ವಜ ಮತ್ತು ಪ್ರತ್ಯೇಕ ಸಂವಿಧಾನವನ್ನು ಹೊಂದಿತ್ತು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಬದಲಾವಣೆಗಳಾಗಿವೆ. ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಸಾಕಾರಗೊಳಿಸಿದ್ದಾರೆ.
ಪ್ರತಿ ಗ್ರಾಮಮಟ್ಟದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಹ ವಾತಾವರಣವನ್ನು ಕಲ್ಪಿಸಿದ್ದಾರೆ ಎಂದು ದೇಶದಲ್ಲಿ ಶಾಂತಿ ಮತ್ತು ಏಕತೆಗಾಗಿ ಹೋರಾಡಿ ಪ್ರಶಸ್ತಿ ಗಳಿಸಿದ ಸಿಆರ್ಪಿಎಫ್ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.
ಜಮ್ಮು-ಕಾಶ್ಮೀರವನ್ನು ಪೂರ್ತಿಯಾಗಿ ಭಾರತದೊಂದಿಗೆ ಒಂದುಗೂಡಿಸಲು ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ಪ್ರೇಮ್ ನಾಥ್ ಡೋಗ್ರಾ ಹೋರಾಡಿದ ಭೂಮಿ ಇದು. ನಮ್ಮ ದೇಶ ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನವನ್ನು ಹೊಂದಿರಬೇಕು ಎನ್ನುವುದಕ್ಕೆ ಶ್ಯಾಮ ಪ್ರಸಾದ್ ಮುಖರ್ಜಿ ಸರ್ವ ತ್ಯಾಗಗಳನ್ನೂ ಮಾಡಿದ್ದರು.