ಶಿಯೋಪುರ್ (ಮಧ್ಯಪ್ರದೇಶ):ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಓವನ್ ಎಂಬ ಹೆಸರಿನ ಗಂಡು ಚಿರತೆಯನ್ನು ಇನ್ನೂ ಸೆರೆಹಿಡಿಯಲು ಸಾಧ್ಯವಾಗಿಲ್ಲ. ಇದರ ಮಧ್ಯೆ ಆಶಾ ಎಂಬ ಹೆಣ್ಣು ಚಿರತೆ ಪರಾರಿಯಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಕಳೆದ ಎರಡು ಮೂರು ದಿನಗಳಿಂದ ಆಶಾ ಕುನೋ ರಾಷ್ಟ್ರೀಯ ಉದ್ಯಾನವನದ ಬಫರ್ ವಲಯದಲ್ಲಿ ಕಾಣಿಸಿಕೊಂಡಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಹೆಸರಿಸಿರುವ ಹೆಣ್ಣು ಚಿರತೆ ಕುನೋದ ಮೀಸಲು ವಲಯ ಮತ್ತು ಬಫರ್ ವಲಯದ ನಡುವೆ ಸಂಚರಿಸುತ್ತಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹೆಣ್ಣು ಚಿರತೆ ಹೆಚ್ಚಾಗಿ ನದಿ ದಡದಲ್ಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಓವನ್: ಭಾನುವಾರ ಬೆಳಗ್ಗೆ ವಿಜಯಪುರದ ಜಾರ್ ಬರೋಡಾ ಗ್ರಾಮದ ಬಳಿಯ ಪ್ರದೇಶಕ್ಕೆ ಬಂದಿದ್ದ ಗಂಡು ಚಿರತೆ ಓವನ್ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಓವನ್ ಹಲವಾರು ಬಾರಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.