ಗುವಾಹಟಿ (ಅಸ್ಸೋಂ): ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಮಣಿಪುರದಿಂದ ಮುಂಬೈವರಗೆ 'ಭಾರತ್ ಜೋಡೋ ನ್ಯಾಯ ಯಾತ್ರೆ' ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಜ್ಜಾಗಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಯಾತ್ರೆಗೆ ಅಡೆತಡೆಗಳನ್ನು ಉಂಟು ಮಾಡುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಣಿಪುರದ ಇಂಫಾಲ್‌ನಿಂದ ಜನವರಿ 14ರಿಂದ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಲಿದ್ದಾರೆ. ಆದರೆ, ಈ ಯಾತ್ರೆಗೆ ಮಣಿಪುರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಬುಧವಾರ ಕಾಂಗ್ರೆಸ್ ಆರೋಪಿಸಿದೆ. ಆದಾಗ್ಯೂ, ಮಣಿಪುರ ಸರ್ಕಾರವು ಸೀಮಿತ ಜನರ ಭಾಗವಹಿಸಬೇಕೆಂಬ ಷರತ್ತಿನೊಂದಿಗೆ ಯಾತ್ರೆಯ ಉದ್ಘಾಟನಾ ಸಮಾವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಮತ್ತೊಂದೆಡೆ, ಅಸ್ಸೋಂ ಕಾಂಗ್ರೆಸ್ ಕೂಡ ಬಿಜೆಪಿಯ ರಾಜ್ಯ ಸರ್ಕಾರದ ಇದೇ ರೀತಿಯ ಆರೋಪವನ್ನು ಮಾಡಿದೆ. ಬಿಜೆಪಿ ಸರ್ಕಾರವು ಯಾತ್ರೆಗೆ ಅಡ್ಡಿ ಪಡಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದೆ. ಬಿಜೆಪಿ ಸರ್ಕಾರವು ಭಾರತ್ ಜೋಡೋ ಯಾತ್ರೆಗೆ ಅನುಮತಿ ನೀಡದಿದ್ದರೆ, ನಾವು ಅಸ್ಸೋಂ ಜನರ ಅನುಮತಿಯೊಂದಿಗೆ ಯಾತ್ರೆ ಆರಂಭಿಸಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ದೇಬಬ್ರತಾ ಸೈಕಿಯಾ ತಿಳಿಸಿದ್ದಾರೆ.
ಗುವಾಹಟಿಯ ರಾಜೀವ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೋಡೋ ನ್ಯಾಯ್ ಯಾತ್ರೆಯು ಜನವರಿ 18ರಂದು ಅಸ್ಸೋಂಗೆ ಪ್ರವೇಶಿಸುತ್ತದೆ. ಜನವರಿ 25ರವರೆಗೆ ಯಾತ್ರೆಯು ಒಟ್ಟು 17 ಜಿಲ್ಲೆಗಳಲ್ಲಿ ಒಟ್ಟು 833 ಕಿ.ಮೀ. ಸಂಚರಿಸಲಿದೆ. ಯಾತ್ರೆಗೆ ಅನುಮತಿ ಕೋರಿ ಸರ್ಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇನ್ನೂ ಅನುಮತಿ ನೀಡಿಲ್ಲ. ಯಾತ್ರೆ ತಡೆಯಲು ಬಿಜೆಪಿ ಪ್ರಯತ್ನಿಸಿದರೂ, ಜನ ಬೆಂಬಲದೊಂದಿಗೆ ಯಾತ್ರೆ ಮುನ್ನಡೆಯಲಿದೆ. ಯಾತ್ರೆಯನ್ನು ಕಾಂಗ್ರೆಸ್ ಶಾಂತಿಯುತವಾಗಿ ನಡೆಸಲಿದೆ. ಈ ಪ್ರಯಾಣವು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಸಂವಿಧಾನ ರಕ್ಷಣೆ ಹಾಗೂ ಜಾಗೃತಿ ಮೂಡಿಸಲು ಯಾತ್ರೆ ನಡೆಸಲಾಗುವುದು ಎಂದರು.
ಇದೆ ವೇಳೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸೈಕಿಯಾ, ಪ್ರಸ್ತುತ ಸಂವಿಧಾನ ಉಲ್ಲಂಘಿಸುವ ಮೂಲಕ ಹೊಸ ಸಂವಿಧಾನವನ್ನು ರಚಿಸಲು ಬಿಜೆಪಿ ಬಯಸುತ್ತಿದೆ. ದೇಶದ ಎಲ್ಲ ಜನರ ಆಶೋತ್ತರಗಳನ್ನು ಈಡೇರಿಸಲು ದೇಶದ ಸಂವಿಧಾನವನ್ನು ಸಿದ್ಧಪಡಿಸಲಾಗಿದೆ. ಆದರೆ, ಬಿಜೆಪಿಯವರು ದೇಶದ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರದಲ್ಲಿದ್ದಾರೆ. ಇಂದು ದೇಶದ ಸ್ಥಿತಿ ಚೆನ್ನಾಗಿಲ್ಲ. ಬಿಜೆಪಿಯವರು ಕೇವಲ ಫಲಾನುಭವಿಗಳನ್ನು ಮಾತ್ರ ಸೃಷ್ಟಿಸಿದ್ದಾರೆ. ಜನರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಜನಸಾಮಾನ್ಯರನ್ನು ಹಿಂಸಿಸುತ್ತಿದ್ದಾರೆ. ರಾಜಕೀಯ ವಾತಾವರಣ ನಾಶವಾಗಿದೆ. ಇದರ ಬದಲಾವಣೆಗಾಗಿ ಯಾತ್ರೆಗೆ ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷದ ಚುನಾವಣಾ ರ್‍ಯಾಲಿ ಅಲ್ಲ: ಪ್ರಹ್ಲಾದ ಜೋಶಿ