ತಿರುವನಂತಪುರಂ (ಕೇರಳ): ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಕೇರಳ ಸರ್ಕಾರವು ಹಲವು ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಕೈಗೊಂಡಿದೆ. ಪ್ರಮುಖ ಸ್ಥಳಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕಲು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ) ಕ್ಯಾಮರಾಗಳನ್ನು ಅಳವಡಿಸಿದೆ. ಇದರಿಂದಾಗಿ ಉಲ್ಲಂಘನೆ ಪ್ರಕರಣಗಳು ಅರ್ಧದಷ್ಟು ಕಡಿಮೆಯಾಗಿವೆ ಎಂದು ಕೇರಳ ಸಾರಿಗೆ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಸಾರಿಗೆ ಸಚಿವರಿಗೆ ಇಲಾಖೆ ನೀಡಿರುವ ವರದಿ ಪ್ರಕಾರ, ಪ್ರಮುಖ ರಸ್ತೆಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮರಾಗಳನ್ನು ಅಳವಡಿಸಿರುವುದರಿಂದ ಸರಾಸರಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ತಗ್ಗಿವೆ. ಕ್ಯಾಮರಾ ಅಳವಡಿಸುವ ಮೊದಲು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಿನಕ್ಕೆ 4.5 ಲಕ್ಷದಷ್ಟು ವರದಿಯಾಗುತ್ತಿದ್ದವು. ಇದೀಗ ಪ್ರಕರಣಗಳ ಸಂಖ್ಯೆ 2.1 ಲಕ್ಷಕ್ಕೆ ಇಳಿದಿದೆ ಎಂದು ತಿಳಿಸಿದೆ. ಇದರ ಜೊತೆಗೆ, ಎಐ ಕ್ಯಾಮರಾ ಅಳವಡಿಸಿದ ನಂತರ ಹೆಲ್ಮೆಟ್ ಧರಿಸುವ ಬೈಕ್ ಸವಾರರ ಸಂಖ್ಯೆಯೂ ಜಾಸ್ತಿಯಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಕಳೆದ ಏಪ್ರಿಲ್ 20 ರಂದು ಸಂಚಾರಿ ನಿಯಮ ಉಲ್ಲಂಘನೆಯನ್ನು ತಡೆಗಟ್ಟಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಾದ್ಯಂತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮರಾ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ರಾಜ್ಯಾದ್ಯಂತ ಸುಮಾರು 726 ಎಐ ಕ್ಯಾಮರಾಗಳನ್ನು ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿತ್ತು.