ನವದೆಹಲಿ: ಭಾರತ ಸರ್ಕಾರವು ಸ್ವಾತಂತ್ರ್ಯದ ನಂತರ ನಡೆದ ಯಾವುದೇ ಜನಗಣತಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಹೊರತುಪಡಿಸಿ ಜಾತಿವಾರು ಜನಸಂಖ್ಯೆಯನ್ನು ಲೆಕ್ಕ ಹಾಕಿಲ್ಲ ಎಂದು ಗೃಹ ಸಚಿವಾಲಯ ಮಂಗಳವಾರ ಹೇಳಿದೆ.
ಪ್ರಸ್ತಾವಿತ 2021 ರ ಜನಗಣತಿಯ ಪ್ರಸ್ತುತ ಸ್ಥಿತಿಯ ಕುರಿತು ಸಂಸತ್ ಸದಸ್ಯರು ಸದನದಲ್ಲಿ ಪ್ರಶ್ನೆ ಕೇಳಿದ್ದರು. ಪ್ರಸ್ತಾವಿತ ಜನಗಣತಿಯಲ್ಲಿ ಜಾತಿ ಮತ್ತು ಉಪ ಜಾತಿ ಸೇರಿದಂತೆ ಅವುಗಳ ಸಮಾನಾರ್ಥಕ ಜಾತಿಪದಗಳ ಜನಗಣತಿ ನಡೆಸಲು ಸರ್ಕಾರವು ಪರಿಗಣಿಸುತ್ತಿದೆಯೇ ಎಂದು ಕೇಳಲಾಗಿತ್ತು.
ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, 2021 ರ ಜನಗಣತಿಯನ್ನು ನಡೆಸುವ ಸರ್ಕಾರದ ಉದ್ದೇಶವನ್ನು ಮಾರ್ಚ್ 28, 2019 ರಂದು ಭಾರತದ ಗೆಜೆಟ್‌ನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಜನಗಣತಿ 2021 ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಅವರು ಹೇಳಿದರು.
ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ 1950 ಮತ್ತು ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ 1950 ರ ಪ್ರಕಾರ ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಮತ್ತು ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಎಂದು ನಿರ್ದಿಷ್ಟವಾಗಿ ಅಧಿಸೂಚಿಸಲಾದ ಜಾತಿಗಳು ಮತ್ತು ಬುಡಕಟ್ಟುಗಳನ್ನು ಜನಗಣತಿಯಲ್ಲಿ ಎಣಿಸಲಾಗಿದೆ. ಸ್ವಾತಂತ್ರ್ಯದ ನಂತರ ಭಾರತ ಸರ್ಕಾರವು ಜನಗಣತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳನ್ನು ಹೊರತುಪಡಿಸಿ ಜಾತಿವಾರು ಜನಸಂಖ್ಯೆಯನ್ನು ಎಣಿಸಿಲ್ಲ ಎಂದು ಅವರು ಉತ್ತರಿಸಿದರು.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ 1971 ಜನಗಣತಿ ನಂಟಿನ ಕಗ್ಗಂಟು: ಇದರ ಹಿಂದಿದೆ ಜನಸಂಖ್ಯೆ ನಿಯಂತ್ರಣದ ಗುಟ್ಟು