ಲಖನೌ (ಉತ್ತರ ಪ್ರದೇಶ) :ಗುಜರಾತ್ನಲ್ಲಿವಜ್ರ ವ್ಯಾಪಾರಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿ 40 ಕೋಟಿ ರೂ. ಮೌಲ್ಯದ ಡೈಮಂಡ್ ದೋಚಿ ಪರಾರಿಯಾಗಿದ್ದ ಹಂತಕ ಐದು ವರ್ಷಗಳ ಬಳಿಕ ಉತ್ತರ ಪ್ರದೇಶದ ವಿಶೇಷ ಕಾರ್ಯಾಚರಣೆ (ಎಸ್‌ಟಿಎಫ್)ಪಡೆಯ ಬಲೆಗೆ ಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಅಂಬೇಡ್ಕರ್ ನಗರದ ನಿವಾಸಿ ಶಕೀಲ್ ಅಲಿಯಾಸ್ ಕುಕ್ಕು ಎಂದು ಗುರುತಿಸಲಾಗಿದೆ.
ಈ ಹಿಂದೆ ನಡೆದ ದರೋಡೆ ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳನ್ನು ಗುಜರಾತ್ ಪೊಲೀಸರು ಈಗಾಗಲೇ ಬಂಧಿಸಿದ್ದರು. ಅದರಲ್ಲಿ ಕುಕ್ಕು ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತ ಕಳೆದ ಐದು ವರ್ಷಗಳಿಂದ ಉತ್ತರಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಗುಜರಾತ್ ಪೊಲೀಸರು ಮಾತ್ರ ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸಿರಲಿಲ್ಲ. ತಲೆಮರೆಸಿಕೊಂಡಿದ್ದ ಕುಕ್ಕು ಬಂಧನಕ್ಕಾಗಿ ಯುಪಿ ಪೊಲೀಸರ ಸಹಾಯಕೋರಿದ್ದರು. ಇದರ ಬೆನ್ನೆಲೆ ಯುಪಿ ಪೊಲೀಸ್ ಇಲಾಖೆ ಎಸ್‌ಟಿಎಫ್ ತಂಡ ರಚಿಸಿತ್ತು.
ಈ ಕುರಿತು ಮಾತಾನಾಡಿರುವ ಎಸ್ಟಿಎಫ್ನ ಎಸ್‌ಎಸ್‌ಪಿ ವಿಶಾಲ್ ವಿಕ್ರಮ್ ಸಿಂಗ್, ’’ಬಹಳ ದಿನಗಳಿಂದ ಗುಜರಾತ್ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಟ್ ಆರೋಪಿ ಕುಕ್ಕು ಬಂಧನಕ್ಕೆ ಗುಜರಾತ್ ಪೊಲೀಸರು ನಮ್ಮ ಸಹಾಯ ಕೋರಿದ್ದರು. ಹೇಗಾದರೂ ಆರೋಪಿಯನ್ನು ಸೆರೆ ಹಿಡಿಯಬೇಕು ಎಂಬ ಉದ್ದೇಶದಿಂದ ಎಸ್‌ಟಿಎಫ್ ತಂಡ ರಚನೆ ಮಾಡಿದ್ದೆವು. ಗುಜರಾತ್ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡು ಮಂಗಳವಾರ ಡಿ.12 ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ಗುಜರಾತ್ಗೆ ಕೆಲಸಕ್ಕೆಂದು ತನ್ನ ಸ್ನೇಹಿತರೊಂದಿಗೆ ಹೋಗಿದ್ದ ಸಂದರ್ಭದಲ್ಲಿ ಯೋಜನೆ ರೂಪಿಸಿ ದರೋಡೆ ಮಾಡಿರುವುದಾಗಿ ಕುಕ್ಕು ಹೇಳಿದ್ದಾನೆ. ವಜ್ರಗಳನ್ನು ದೋಚಿದ ನಂತರ ಯುಪಿಗೆ ಹಿಂತಿರುಗಿದ ಆರೋಪಿ ಅಂಬೇಡ್ಕರ್ ನಗರ, ಪ್ರತಾಪಗಢ ಮತ್ತು ಲಖನೌದಲ್ಲಿ ಅಜ್ಞಾತ ಸ್ಥಳಗಳಲ್ಲಿ ವಾಸಿಸುತ್ತಿದ್ದನು. ಬಳಿಕ ಪಂಜಾಬ್‌ನ ಲೂಧಿಯಾನಕ್ಕೆ ಹೋಗಿ ಕೆಲವು ದಿನಗಳ ಕಾಲ ಉಳಿದುಕೊಂಡಿದ್ದನು. ಕೆಲವು ದಿನಗಳ ಹಿಂದೆ ತನ್ನ ಹಳೆಯ ಸ್ನೇಹಿತರು ಮತ್ತು ಸಹೋದರನನ್ನು ಭೇಟಿಯಾಗಲು ಲಖನೌಗೆ ಬಂದಿದ್ದನು. ಈ ಹಿಂದೆ 2015ರಲ್ಲಿ ಅಂಬೇಡ್ಕರ್ ನಗರದಲ್ಲಿ ಬೀಡಿ ಉದ್ಯಮಿಯೊಬ್ಬರಿಂದ 40 ಲಕ್ಷ ರೂಪಾಯಿ ದರೋಡೆ ಮಾಡಿ ಜೈಲಿಗೆ ಹೋಗಿದ್ದನು ಎಂದು ವಿಶಾಲ್ ವಿಕ್ರಮ್ ಸಿಂಗ್ ಆರೋಪಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ :ಮಾರ್ಚ್ 18, 2018 ರಂದು ಗುಜರಾತ್ನ ಅಹಮದಾಬಾದ್ ಜಿಲ್ಲೆಯ ವಡಾಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಜ್ರದ ಉದ್ಯಮಿ ಅರ್ವಾದ್ ಭಾಯಿ ಅವರನ್ನು ಏಳು ಜನರು ಗುಂಡಿಕ್ಕಿ ಹತ್ಯೆ ಮಾಡಿ, 35 ಲಕ್ಷ ರೂಪಾಯಿ ನಗದು ಮತ್ತು 40 ಕೋಟಿ ಮೌಲ್ಯದ ವಜ್ರಗಳನ್ನು ದೋಚಿ ಪರಾರಿಯಾಗಿದ್ದರು. ಈ ಕೃತ್ಯದಿಂದ ಇಡೀ ಗುಜರಾತ್ ತಲ್ಲಣಗೊಂಡಿತ್ತು. ಕಾರ್ಯಪ್ರವೃತ್ತರಾದ ಗುಜರಾತ್ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜು ಎಂಬ ಯುವಕನನ್ನು ಮೊದಲಿಗೆ ಬಂಧಿಸಿದ್ದರು. ಬಂಧನದ ನಂತರ ರಾಜು ಎಲ್ಲರ ಹೆಸರುಗಳನ್ನು ಬಹಿರಂಗಪಡಿಸಿದ್ದನು. ಹೀಗಾಗಿ ಅಯೋಧ್ಯೆಯಿಂದ ರಜನೀಶ್ ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದರು. ಕ್ರಮೇಣ ಗುಜರಾತ್ ಪೊಲೀಸರು ಅಯೋಧ್ಯೆ ಮತ್ತು ಅಂಬೇಡ್ಕರ್ ನಗರ ಜಿಲ್ಲೆಯಿಂದ ಆರೋಪಿಗಳನ್ನು ಬಂಧಿಸಿದ್ದರು.
ಇದನ್ನೂ ಓದಿ :ವಿಳಾಸ ಕೇಳುವ ನೆಪದಲ್ಲಿ ಬೈಕ್ ಅಡ್ಡಗಟ್ಟಿ ಸುಲಿಗೆ, ನಾಲ್ವರು ಆರೋಪಿಗಳ ಬಂಧನ