ಪಾಟ್ನಾ (ಬಿಹಾರ) :ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನದ ಎರಡನೇ ದಿನದಂದು ಜಾತಿ ಗಣತಿ ಸಮೀಕ್ಷೆಯ ಆರ್ಥಿಕ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಸಮೀಕ್ಷೆಯ ವರದಿಯ ಪ್ರಕಾರ, ಬಿಹಾರದಲ್ಲಿ ಕೇವಲ ಶೇ.7ರಷ್ಟು ಜನ ಮಾತ್ರ ಪದವೀಧರರಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸಾಮಾನ್ಯ ಕುಟುಂಬಗಳಲ್ಲಿ 25.9 ಪ್ರತಿಶತದಷ್ಟು ಬಡವರಿದ್ದಾರೆ ಎಂದು ವಿವರಿಸಲಾಗಿದೆ. ಬಡವರಲ್ಲಿ ಭೂಮಿಹಾರ್ ಮತ್ತು ಬ್ರಾಹ್ಮಣ ಕುಟುಂಬಗಳ ಜನರು ಸೇರಿದ್ದಾರೆ ಎಂಬುದು ವರದಿಯ ವಿಶೇಷತಗಳಲ್ಲೊಂದು.
ಜಾತಿ ಸಮೀಕ್ಷೆಯ ಆರ್ಥಿಕ ಮತ್ತು ಶೈಕ್ಷಣಿಕ ವರದಿ : ಬಿಹಾರ ಜಾತಿ ಸಮೀಕ್ಷೆಯ ಆರ್ಥಿಕ ಮತ್ತು ಶೈಕ್ಷಣಿಕ ವರದಿಯನ್ನು ಮಂಗಳವಾರ ಸದನದಲ್ಲಿ ಮಂಡಿಸಲಾಗಿದೆ. ವರದಿಯಲ್ಲಿರುವ ಬಡ ಕುಟುಂಬಗಳ ಬಗ್ಗೆ ಮಾತನಾಡುವುದಾದರೆ, ಅದರಲ್ಲಿ ಶೇ 25.09ರಷ್ಟು ಸಾಮಾನ್ಯ ವರ್ಗ, ಶೇ 33.16 ಹಿಂದುಳಿದ ವರ್ಗ, ಶೇ 33.58ರಷ್ಟು ಅತ್ಯಂತ ಹಿಂದುಳಿದ ವರ್ಗ, ಶೇ 42.93ರಷ್ಟು ಪರಿಶಿಷ್ಟ ಜಾತಿ, ಶೇ 42.70 ಅನುಸೂಚಿತ ಬುಡಕಟ್ಟು ಮತ್ತು ಶೇ 23.72 ಇತರ ಜಾತಿ ಕುಟುಂಬಗಳು ಸೇರಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಅತ್ಯಂತ ಬಡವರ ಮಾಹಿತಿ :ಸಾಮಾನ್ಯ ವರ್ಗದಲ್ಲಿ ಗರಿಷ್ಠ ಅಂದರೆ 25.32 ಪ್ರತಿಶತ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದಾರೆ. ಬ್ರಾಹ್ಮಣರಲ್ಲಿ ಶೇ 25.3ರಷ್ಟು, ರಜಪೂತರಲ್ಲಿ ಶೇ 24.89ರಷ್ಟು ಮತ್ತು ಕಾಯಸ್ಥರಲ್ಲಿ ಶೇ 13.83ರಷ್ಟು ಜನ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ ಎಂದು ಜನಗಣತಿ ವರದಿಯಲ್ಲಿ ಹೇಳಲಾಗಿದೆ. ಇದಲ್ಲದೆ ಭಟ್ ಕುಟುಂಬದ ಶೇ. 23.68, ಮಲ್ಲಿಕ್ ಮತ್ತು ಮುಸ್ಲಿಂ ಶೇ.17.26, ಹರಿಜನ ಶೇ 29.12, ಕಿನ್ನರ ಶೇ 25.73, ಕುಶ್ವಾಹ ಶೇ 34.32, ಯಾದವ್ ಶೇ 35.87, ಕುರ್ಮಿ ಶೇ 29.90, ಸೋನಾರ್ 26.58 ಮತ್ತು ಇತರ ಜಾತಿಗಳಲ್ಲಿ ಶೇ 32.99ರಷ್ಟು ಬಡವರಿದ್ದಾರೆ ಎಂದು ಜಾತಿ ಗಣತಿಯಲ್ಲಿ ವಿವರಿಸಲಾಗಿದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದ್ದಾರೆ.