ನವದೆಹಲಿ: ಗೋಧಿ ಧಾನ್ಯಗಳ ರಫ್ತಿನ ಮೇಲೆ ಈಗಾಗಲೇ ನಿರ್ಬಂಧ ವಿಧಿಸಿರುವ ಭಾರತ, ಈಗ ಗೋಧಿ ಹಿಟ್ಟು ಮತ್ತು ಮೈದಾ, ರವಾ ಮುಂತಾದ ಗೋಧಿಯ ಉಪ ಉತ್ಪನ್ನಗಳ ರಫ್ತಿಗೂ ತಡೆ ಒಡ್ಡಿದೆ.
ವಿದೇಶ ವ್ಯಾಪಾರ ಡೈರೆಕ್ಟರೇಟ್ ಜನರಲ್ (ಡಿಜಿಎಫ್‌ಟಿ) ಕಚೇರಿಯ ಅಧಿಸೂಚನೆಯ ಪ್ರಕಾರ, ಈ ನಿರ್ಧಾರವು ಜುಲೈ 12 ರಿಂದ ಜಾರಿಗೆ ಬರಲಿದೆ. ವಿದೇಶಕ್ಕೆ ಯಾವುದೇ ಶಿಪ್ಮೆಂಟ್ ಕಳುಹಿಸುವ ಮುನ್ನ ರಫ್ತುದಾರರು, ಗೋಧಿ ಕುರಿತಾದ ಅಂತರ್ ಸಚಿವಾಲಯ ಸಮಿತಿಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಡಿಜಿಎಫ್‌ಟಿ ಜುಲೈ 6 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ಪೂರೈಕೆಗೆ ಉಂಟಾಗುತ್ತಿರುವ ಅಡೆತಡೆಗಳು ಅನೇಕ ಹೊಸ ಪಾಲುದಾರರನ್ನು ಸೃಷ್ಟಿಸಿವೆ. ಇದರಿಂದ ಬೆಲೆಗಳ ಏರಿಳಿತ ವಿಪರೀತವಾಗಿದ್ದು, ಗುಣಮಟ್ಟ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಡಿಜಿಎಫ್‌ಟಿ ಹೇಳಿದೆ. ಭಾರತದಿಂದ ರಫ್ತು ಮಾಡುವ ಗೋಧಿ ಹಿಟ್ಟಿನ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಗೋಧಿ ಹಿಟ್ಟಿನ ರಫ್ತು ನೀತಿಯು ಮುಕ್ತವಾಗಿ ಉಳಿಯುತ್ತದೆ ಮತ್ತು ಅದರ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗಿಲ್ಲ. ಆದಾಗ್ಯೂ, ರಫ್ತುದಾರರು ಗೋಧಿ ಹಿಟ್ಟು ರಫ್ತು ಮಾಡಬೇಕಾದರೆ ಅಂತರ್ ಸಚಿವಾಲಯ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ.
ಇದನ್ನು ಓದಿ:Gold and Silver rate: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್.. ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ