ತಿರುಪತಿ (ಆಂಧ್ರಪ್ರದೇಶ):ಗಂಡ- ಹೆಂಡತಿ ಜಗಳ ಸರ್ವೇ ಸಾಮಾನ್ಯ. ಮನೆ ಎಂದ ಮೇಲೆ ಜಗಳ ಇದ್ದದ್ದೇ. ಅದು ಅತಿರೇಕಕ್ಕೆ ಹೋದರೆ ಪತ್ನಿ ತವರು ಮನೆಗೆ ಹೋಗ್ತಾಳೆ. ಇನ್ನೂ ಅತಿಯಾದರೆ ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಗಂಡನ ಜಗಳದಿಂದ ಬೇಸತ್ತು ಮಾಡಿದ ಕೆಲಸ ನಿಜಕ್ಕೂ ಅಚ್ಚರಿ ಮಾಡಿಸಿದೆ.
ಪತಿಯ ಜಗಳದಿಂದ ಬೇಸತ್ತು ಒಂಬತ್ತು ತಿಂಗಳ ಗರ್ಭಿಣಿಯೊಬ್ಬರು 65 ಕಿ.ಮೀ ನಡೆದುಕೊಂಡು ಬಂದು, ಕೊನೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರ್ಷಿಣಿ ಎಂಬಾಕೆ ಶುಕ್ರವಾರ ರಾತ್ರಿ ತನ್ನ ಪತಿಯೊಂದಿಗೆ ಜಗಳವಾದಾಗ ಮನೆ ಬಿಟ್ಟು ಹೊರಟು ಬಂದಿದ್ದಾರೆ. ನಾಯ್ಡುಪೇಟೆ ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಈ ವೇಳೆ ಮಹಿಳೆ ಸ್ಥಳೀಯರ ಸಹಾಯ ಕೋರಿದ್ದಾರೆ. ಅಂತಿಮವಾಗಿ ಯುವಕನೋರ್ವ ಆಕೆಗೆ ಸಹಾಯ ಮಾಡಿದ್ದು, ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾನೆ. ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಂದಿದ್ದು ವರ್ಷಿಣಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮಗು ಕಡಿಮೆ ತೂಕವಿದ್ದರೂ ಸಹ, ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಉತ್ತಮ ಚಿಕಿತ್ಸೆಗಾಗಿ ಮಗುವನ್ನು ನೆಲ್ಲೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಆಸ್ಪತ್ರೆಯ ಸಿಬ್ಬಂದಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವರ್ಷಿಣಿ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯ ವೈಎಸ್ಆರ್ ನಗರದ ಮೂಲದವರಾಗಿದ್ದು, ಕೆಲಸದ ನಿಮಿತ್ತ ತನ್ನ ಪತಿಯೊಂದಿಗೆ ತಿರುಪತಿಯಲ್ಲಿ ವಾಸಿಸುತ್ತಿದ್ದಳು. ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರು. ಮಗುವಿಗೆ ಜೀವ ಬೆದರಿಕೆ ಇದೆ ಎಂದು ಶಂಕಿಸಿ, ವರ್ಷಿಣಿ ಕೈಯಲ್ಲಿ ಒಂದು ಪೈಸೆ ಇಲ್ಲದೆ ಮನೆಯಿಂದ ಓಡಿಬಂದಿದ್ದಾಳೆ ಎನ್ನಲಾಗಿದೆ. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ:ಬನ್ನಿ ಮಕ್ಕಳೇ ಶಾಲೆಗೆ.. ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭ; ಮಕ್ಕಳಿಗೆ ಅದ್ಧೂರಿ ಸ್ವಾಗತ