ಶ್ರೀನಗರ:ದೇಶದ ಮುಕುಟಮಣಿಯಾದ ಜಮ್ಮು ಕಾಶ್ಮೀರದಲ್ಲಿ ರೈಲು ಯೋಜನೆಗಳು ಜೀವ ಪಡೆದುಕೊಂಡಿದ್ದು, ಅತ್ಯಾಧುನಿಕ ವಂದೇ ಭಾರತ್ ಸೇರಿದಂತೆ ಸರ್ವಋತುಗಳ ರೈಲ್ವೆ ಸಂಪರ್ಕವನ್ನು 2024 ರ ಮೊದಲ ತ್ರೈಮಾಸಿಕದಲ್ಲಿ ಅಲ್ಲಿನ ಜನರಿಗೆ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ಇಲಾಖೆ ಸಚಿವ ಅಶ್ವನಿ ವೈಷ್ಣವ್, ಆಮೆಗತಿಯಲ್ಲಿ ಸಾಗುತ್ತಿರುವ ಉತ್ತರ ರೈಲ್ವೆಯ 111 ಕಿಲೋಮೀಟರ್ ಉದ್ದದ ಉಧಂಪುರ- ಶ್ರೀನಗರ- ಬಾರಾಮುಲ್ಲಾ ನಡುವಿನ ರೈಲು ಸಂಪರ್ಕ ಜಾಲವು ಮುಂದಿನ ವರ್ಷಕ್ಕೆ ಪೂರ್ಣಗೊಳ್ಳಲಿದೆ. ಕೇಂದ್ರಾಡಳಿತ ಪ್ರದೇಶ ದೇಶದ ವಿವಿಧ ಭಾಗಗಳಿಂದ ರೈಲು ಸಂಪರ್ಕ ಪಡೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಉಧಂಪುರ - ಶ್ರೀನಗರ - ಬಾರಾಮುಲ್ಲಾ ಸಂಪರ್ಕಿಸುವ ಯೋಜನೆಯ 111 ಕಿಲೋಮೀಟರ್ ಉದ್ದದ ಕತ್ರಾ - ಬನಿಹಾಲ್ ರೈಲು ಮಾರ್ಗವು ಬಹುತೇಕ ಪೂರ್ಣಗೊಂಡಿದ್ದಾಗಿ ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ. ಹೀಗಾಗಿ ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುವ ಉಧಮ್‌ಪುರ - ಬನಿಹಾಲ್ ಮಾರ್ಗವನ್ನು ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು.
ಕುಂಟುತ್ತಾ ಸಾಗಿದ ನಿರ್ಮಾಣ ಕಾರ್ಯ:ಈ ಮಾರ್ಗದಲ್ಲಿ ಅತ್ಯಾಧುನಿಕ ವಂದೇ ಭಾರತ್ ಕೂಡ ಸಂಚರಿಸಲಿದೆ. ಎಲ್ಲ ಋತುಗಳಲ್ಲೂ ಸಂಪರ್ಕ ಸಾಧ್ಯವಾಗುವ ರೀತಿಯಲ್ಲಿ ರೈಲುಗಳನ್ನು ಓಡಿಸಲಾಗುವುದು. 2019 ರ ನವೆಂಬರ್ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರು 272 ಕಿಮೀ ಉದ್ದದ 27,949 ಕೋಟಿ ರೂಪಾಯಿ ವೆಚ್ಚದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಿದ್ದರು. ಆದರೆ, ಈ ಹಾದಿ ದುರ್ಗಮವಾಗಿರುವ ಕಾರಣ ನಿಗದಿಗಿಂತ ಹಲವು ಬಾರಿ ವಿಸ್ತರಣೆಯಾಗುತ್ತಲೇ ಬಂದಿದೆ.
ಈ ಮಾರ್ಗದಲ್ಲಿ 119 ಕಿಮೀ ವ್ಯಾಪ್ತಿಯಲ್ಲಿ ದೇಶದ ಉದ್ದ ಸುರಂಗವಾದ T-49 ಸೇರಿದಂತೆ 38 ಸುರಂಗಗಳು ಬರುತ್ತವೆ. ಅಂಜಿ ಖಾಡ್ ನದಿಯ ಕಡಿದಾದ ಇಳಿಜಾರಿನಲ್ಲಿ 927 ಸೇತುವೆಗಳನ್ನು ದಾಟಬೇಕಿದೆ. ರಾಷ್ಟ್ರದ ಏಕೈಕ ಕೇಬಲ್ ರೈಲು ಸೇತುವೆಯಾದ ಪ್ರಸಿದ್ಧ ಚೆನಾಬ್ ಸೇತುವೆಯೂ ಸೇರಿದೆ.
ಕಣಿವೆಯಲ್ಲಿ ರೈಲು ಸಂಪರ್ಕ ಜಾಲ:1947 ರ ಭಾರತ ಮತ್ತು ಪಾಕಿಸ್ತಾನದ ವಿಭಜನೆಯಿಂದಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ರೈಲ್ವೆ ಜಾಲವನ್ನು ಕಡಿತಗೊಳಿಸಲಾಯಿತು. ಸಂಪರ್ಕ ಮರು ಜೋಡಣೆಗೆ ಪಠಾಣ್‌ಕೋಟ್‌ನಿಂದ ಜಮ್ಮುವಿಗೆ ಹೊಸ ಮಾರ್ಗವನ್ನು ನಿರ್ಮಿಸುವ ಅಗತ್ಯಬಿತ್ತು. ಇದು ಬಿಟ್ಟರೆ, 1897 ರಲ್ಲಿ ಮೊದಲ ಬಾರಿಗೆ ಆರಂಭಿಸಲಾಗಿದ್ದ ಸಿಯಾಲ್‌ಕೋಟ್- ಜಮ್ಮು ಮಾರ್ಗ ಇದ್ದ ಏಕೈಕ ಹಳಿಯಾಗಿತ್ತು.
1971 ರಲ್ಲಿ ಜಮ್ಮು- ಪಠಾಣ್‌ಕೋಟ್ ರೈಲುಮಾರ್ಗಕ್ಕೆ ಅಡಿಗಲ್ಲು ಹಾಕಲಾಯಿತಾದರೂ, ಅದು ಹಲವು ಕಾರಣಕ್ಕಾಗಿ ನಾಲ್ಕು ವರ್ಷಗಳನ್ನು ನನೆಗುದಿಗೆ ಬಿದ್ದಿತು. ಬಳಿಕ 54 ಕಿಲೋಮೀಟರ್ ಉದ್ದದ ಜಮ್ಮು- ಉದಂಪುರ್ ಮಾರ್ಗಕ್ಕೆ 1983 ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಗುದ್ದಲಿಪೂಜೆ ಮಾಡಿದರು. ತರುವಾಯ, ಬಾರಾಮುಲ್ಲಾಗೆ 290 ಕಿಲೋಮೀಟರ್‌ಗಳ ರೈಲು ಸಂಪರ್ಕವನ್ನು ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ವಾಗ್ದಾನ ಮಾಡಿತ್ತು.
ಆದರೆ, ಈ ಯೋಜನೆ ಕೂಡ ಯಾವುದೇ ಪ್ರಗತಿ ಕಾಣಲಿಲ್ಲ. 1996ರಲ್ಲಿ ಆಗಿನ ಪ್ರಧಾನಿ ಪಿ ವಿ ನರಸಿಂಹರಾವ್ ಅವರು ಉಧಮ್‌ಪುರ ಮತ್ತು ಬಾರಾಮುಲ್ಲಾ ನಡುವಿನ ರೈಲು ಸಂಪರ್ಕಕ್ಕೆ 2,600 ಕೋಟಿ ರೂ.ಗೆ ಅನುಮೋದನೆ ನೀಡಿದರು. ನಂತರವೂ ಯೋಜನೆಯು ಹಾಳೆಗಳಲ್ಲಿ ಮಾತ್ರ ಉಳಿಯಿತು. 2003 ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಮತ್ತೆ ಮರುಜೀವ ಪಡೆದಿದೆ.
ಇದನ್ನೂ ಓದಿ:ಜಮ್ಮು ರೈಲು ನಿಲ್ದಾಣಕ್ಕೆ ಈಗ 50ರ ಸಂಭ್ರಮ....! ಅಭಿವೃದ್ಧಿ ಪಥದತ್ತ ನಿಲ್ದಾಣ ನಿತ್ಯ 55ಕ್ಕಿಂತ ಹೆಚ್ಚು ರೈಲು ಸಂಚಾರ