ಸಿದ್ಧಿ(ಮಧ್ಯಪ್ರದೇಶ):ಪ್ರಾಣಿ - ಪಕ್ಷಿಗಳ ಸಂಕುಲ ನಶಿಸಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯ ಸೋನ್ ಘರಿಯಾಲ್ ಅಭಯಾರಣ್ಯದಲ್ಲಿ ಸಂತಸದ ಸುದ್ದಿವೊಂದು ಕೇಳಿ ಬಂದಿದೆ. ಬರೋಬ್ಬರಿ ಆರು ವರ್ಷಗಳ ಬಳಿಕ ಎರಡು ಹೆಣ್ಣು ಮೊಸಳೆಗಳು 72 ಮೊಸಳೆ ಮರಿಗಳಿಗೆ ಜನ್ಮ ನೀಡಿವೆ.
ಬರೋಬ್ಬರಿ 72 ಮರಿಗಳಿಗೆ ಜನ್ಮ ನೀಡಿದ ಎರಡು ಮೊಸಳೆ ಮತ್ತಷ್ಟು ಮೊಸಳೆ ಮರಿಗಳು ಹುಟ್ಟುವ ಸಾಧ್ಯತೆ ಇರುವ ಕಾರಣ, ಇವುಗಳ ಮೇಲೆ ಅರಣ್ಯ ಸಿಬ್ಬಂದಿ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಇದಕ್ಕೋಸ್ಕರ ವಿಶೇಷ ತಂಡ ರಚನೆ ಮಾಡಲಾಗಿದೆ. ಜೊತೆಗೆ ಎರಡು ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಎರಡು ಮೊಸಳೆಗಳು ಸದ್ಯ ಇಷ್ಟೊಂದು ಮರಿಗಳಿಗೆ ಜನ್ಮ ಇಟ್ಟಿರುವ ಕಾರಣ, ಅಭಯಾರಣ್ಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದು, ಅವುಗಳಿಗೆ ಯಾವುದೇ ರೀತಿಯ ಹಾನಿಯಾಗದ ರೀತಿಯಲ್ಲಿ ಕ್ರಮ ಕೈಗೊಂಡಿದೆ.
ಇದನ್ನೂ ಓದಿ:ಜಪಾನ್ನಲ್ಲಿ ನಮೋ; ಇಂಡೋ - ಪೆಸಿಫಿಕ್ ಪ್ರದೇಶಕ್ಕೆ ಭಾರತ ಬದ್ಧ ಎಂದ ಪ್ರಧಾನಿ
ಈ ಮೊಸಳೆಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಮೊಟ್ಟೆ ಹಾಕಿ, ಮರಿಗಳಿಗೆ ಜನ್ಮ ನೀಡುವ ಸಾಧ್ಯತೆ ಇದೆ. ಹೀಗಾಗಿ, ಬೇರೆ ಪ್ರಾಣಿಗಳಿಂದ ಮೊಟ್ಟೆಗಳಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮೊಸಳೆ ಮರಿಗಳಿಗೆ ಆಹಾರವಾಗಿ ಇದೀಗ ಸಣ್ಣ ಸಣ್ಣ ಮೀನು ನೀಡಲಾಗ್ತಿದೆ ಎಂದು ಸಿಬ್ಬಂದಿ ಹೇಳಿಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ಈ ಅಭಯಾರಣ್ಯದಲ್ಲಿ ಯಾವುದೇ ಗಂಡು ಮೊಸಳೆ ಇರಲಿಲ್ಲ. ಹೀಗಾಗಿ, ಮರಿಗಳ ಜನನವಾಗಿರಲಿಲ್ಲ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೊರೆನಾದಿಂದ ಗಂಡು ಮೊಸಳೆ ತೆಗೆದುಕೊಂಡು ಬರಲಾಗಿತ್ತು. ಇದರ ಬೆನ್ನಲ್ಲೇ ಕೇವಲ 5 ತಿಂಗಳಲ್ಲಿ 72 ಮೊಸಳೆ ಮರಿಗಳ ಜನನವಾಗಿದೆ.