ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತರು ಬರೋಬ್ಬರಿ 378 ದಿನಗಳ ನಂತರ ಇಂದು ತಮ್ಮ ಮನೆಗಳಿಗೆ ಮರಳಲಿದ್ದಾರೆ.
ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿದ್ದ ರೈತರು ತಮ್ಮ ತಮ್ಮ ಊರುಗಳಿಗೆ ಮರಳಲು ಸಿದ್ಧರಾಗಿದ್ದು, ಕಳೆದ ವರ್ಷ ನವೆಂಬರ್‌ನಿಂದ ಅವರು ಪ್ರತಿಭಟನೆ ನಡೆಸುವ ಸಲುವಾಗಿ ಹಾಕಲಾಗಿದ್ದ ಟೆಂಟ್ಗಳನ್ನು ತೊರೆದಿದ್ದಾರೆ. ಇನ್ನೂ ಕೆಲವರು ಈಗಾಗಲೇ ಕಾಂಕ್ರಿಟ್ ಮೂಲಕ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ರಚನೆಗಳನ್ನು ನಾಶಗೊಳಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಗುರುವಾರ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಪತ್ರ ರವಾನಿಸಿದ ಹಿನ್ನೆಲೆಯಲ್ಲಿ ಕೆಲವರು ಈಗಾಗಲೇ ತಮ್ಮ ಗ್ರಾಮಗಳಿಗೆ ತೆರಳಿದ್ದು, ಇನ್ನೂ ಕೆಲವರು ಡಿಸೆಂಬರ್ 13ರಂದು ಅಮೃತಸರದ ಸ್ವರ್ಣಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ತಮಗೆ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಜಯ ಸಿಕ್ಕ ಕಾರಣದಿಂದ ಟ್ರ್ಯಾಕ್ಟರ್ಗಳನ್ನು ಅಲಂಕರಿಸಿರುವ ಅವರು, 51 ಅಡಿ ಉದ್ದದ ಟ್ರ್ಯಾಲಿಯಲ್ಲಿ ರೈತನಾಯಕರ ಮೆರವಣಿಗೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಒಂದೂವರೆ ವರ್ಷದ ಹಿಂದೆ ಆರಂಭವಾದ ಅಡುಗೆ ಮನೆ ಇನ್ನೂ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಭಟನಾ ಸ್ಥಳದಿಂದ ಹಿಂದಿರುಗುವವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ:ಭಾರತೀಯರ ಪ್ರೀತಿ-ಸಹಕಾರಕ್ಕೆ ಕೃತಜ್ಞತೆ.. ಮಗ 'ಬಾರ್ಡರ್' ಜೊತೆ ಪಾಕಿಸ್ತಾನ ತಲುಪಿದ ಹಿಂದೂ ದಂಪತಿ