ನವದೆಹಲಿ :ದೇಶದ ಈಶಾನ್ಯ ದಿಕ್ಕಿನ ರಾಜ್ಯಗಳಾದನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ವಿಧಿಸಿರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅನ್ನು ಗೃಹ ವ್ಯವಹಾರಗಳ ಸಚಿವಾಲಯವು ಮಂಗಳವಾರ ಮತ್ತೆ ಆರು ತಿಂಗಳವರೆಗೆ ವಿಸ್ತರಿಸಿ ಆದೇಶಿಸಿದೆ. ಸರ್ಕಾರವು ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದ್ದು, ಎರಡೂ ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲಿಸಿದ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯ್ದೆ 1958 ರ ಸೆಕ್ಷನ್ 3 ರ ಅಡಿ ನೀಡಲಾಗಿದ್ದ ಅಧಿಕಾರದ ಅನುಷ್ಠಾನದ ಮೇರೆಗೆ ಕೇಂದ್ರ ಸರ್ಕಾರವು 2 ರಾಜ್ಯದ 8 ಜಿಲ್ಲೆಗಳು ಮತ್ತು 21 ಪೊಲೀಸ್ ಠಾಣೆಗಳಲ್ಲಿ ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ 'ತೊಂದರೆಗೊಳಗಾದ ಪ್ರದೇಶ' (Disturbed area) ಎಂದು ಘೋಷಿಸುವ ಮೂಲದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಹೆಚ್ಚಿನ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು.
ಆದ್ದರಿಂದ, ನಾಗಾಲ್ಯಾಂಡ್‌ನ ದಿಮಾಪುರ್, ನಿಯುಲ್ಯಾಂಡ್, ಚುಮೌಕೆಡಿಮಾ, ಮೊನ್, ಕಿಫಿರೆ, ನೋಕ್ಲಾಕ್, ಫೆಕ್ ಮತ್ತು ಪೆರೆನ್ ಜಿಲ್ಲೆಯ ಪ್ರದೇಶಗಳು ಹಾಗೂ ಕೊಹಿಮಾ ಜಿಲ್ಲೆಯ ಖುಜಾಮಾ, ಕೊಹಿಮಾ ಉತ್ತರ, ಕೊಹಿಮಾ ದಕ್ಷಿಣ, ಝುಬ್ಜಾ ಮತ್ತು ಕೆಜೊಚಾ ಪೊಲೀಸ್ ಠಾಣೆಗಳು ಮತ್ತು ಮೊಕೊಕ್‌ಚುಂಗ್ ಜಿಲ್ಲೆಯ ಮಾಂಗ್‌ಕೊಲೆಂಬಾ, ಮೊಕೊಕ್‌ಚುಂಗ್ - I, ಲಾಂಗ್‌ತೋ, ತುಲಿ, ಲಾಂಗ್‌ಚೆಮ್ ಮತ್ತು ಅನಾಕಿ 'ಸಿ' ಪೊಲೀಸ್ ಠಾಣೆಗಳು ಹಾಗೂ ವೋಖಾ ಜಿಲ್ಲೆಯ ಭಂಡಾರಿ, ಚಂಪಾಂಗ್ ಮತ್ತು ರಲನ್ ಪೊಲೀಸ್ ಠಾಣೆಗಳು ಮತ್ತು ಝುನ್ಹೆಬೋಟೊ ಜಿಲ್ಲೆಯ ಘಟಾಶಿ, ಪುಘೋಬೊಟೊ, ಸತಖಾ, ಸುರುಹುಟೊ, ಝುನ್ಹೆಬೊಟೊ ಮತ್ತು ಅಘುನಾಟೊ ಪೊಲೀಸ್ ಠಾಣೆಗಳನ್ನು ಸೆಕ್ಷನ್ 3 ರ ಅಡಿಯಲ್ಲಿ 'ತೊಂದರೆಗೊಳಗಾದ ಪ್ರದೇಶ' ಎಂದು ಘೋಷಿಸಲಾಗಿತ್ತು. ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ 1958 ಅನ್ನು ಆರು ತಿಂಗಳ ಅವಧಿಗೆ ಅಂದ್ರೆ ಅಕ್ಟೋಬರ್ 1, 2023 ರ ವರೆಗೆ ಜಾರಿಯಲ್ಲಿರುವಂತೆ ತಿಳಿಸಲಾಗಿತ್ತು.
ಮತ್ತೊಂದು ಅಧಿಸೂಚನೆಯಲ್ಲಿ, ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ- 1958 ರ ಅಡಿ ಅರುಣಾಚಲ ಪ್ರದೇಶದ ತಿರಾಪ್, ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳನ್ನು ತೊಂದರೆಗೊಳಗಾದ ಪ್ರದೇಶಗಳೆಂದು ಮಾರ್ಚ್ 24, 2023 ರಂದು ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಹೊರಡಿಸಿದ ಅಧಿಸೂಚನೆ S.O.1422(E) ಪ್ರಕಾರ, ಅಸ್ಸಾಂ ರಾಜ್ಯದ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯ ನಮ್ಸಾಯಿ, ಮಹದೇವಪುರ ಮತ್ತು ಚೌಕಮ್ ಪೊಲೀಸ್ ಠಾಣೆಗಳ ವ್ಯಾಪ್ತಿಯೊಳಗೆ ಬರುವ ಪ್ರದೇಶಗಳು ಮತ್ತು ತಿರಾಪ್, ಚಾಂಗ್ಲಾಂಗ್ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು 'ಗೊಂದಲದ ಪ್ರದೇಶ' ಎಂದು ಘೋಷಿಸಲಾಗಿದೆ. ಇದೀಗ, ಈ ಆದೇಶವನ್ನು ಮತ್ತೆ 6 ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ನೂತನ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ :ಈಶಾನ್ಯದ 2 ರಾಜ್ಯಗಳಲ್ಲಿ AFSPA 6 ತಿಂಗಳು ವಿಸ್ತರಣೆ.. ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ