ಲಕ್ನೋ (ಉತ್ತರ ಪ್ರದೇಶ):ಫೈಜುಲ್ಲಾಗಂಜ್‌ನಲ್ಲಿ ಸತ್ತ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಸತ್ತ ಹಂದಿಗಳ ಮಾದರಿಯನ್ನು ಭೋಪಾಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅದರ ವರದಿ ಮಂಗಳವಾರ ಬಂದಿದ್ದು, ಈ ಭಾಗದಲ್ಲಿ 140ಕ್ಕೂ ಹೆಚ್ಚು ಹಂದಿಗಳು ಜ್ವರದಿಂದಲೇ ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಇದರಿಂದ ಆ ಭಾಗದ ಜನರು ಕಂಗಾಲಾಗಿದ್ದಾರೆ.
ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಸೂರ್ಯಪಾಲ್ ಗಂಗ್ವಾರ್ ಅವರ ಜಿಲ್ಲಾಡಳಿತ ತಂಡ ಸ್ಥಳ ಪರಿಶೀಲನೆ ನಡೆಸಿತು. ಈ ಹಿಂದೆ ಪಾಲಿಕೆ ಆಯುಕ್ತ ಇಂದರ್‌ಜಿತ್ ಸಿಂಗ್ ಕೂಡ ಇಲ್ಲಿ ಪರಿಶೀಲನೆ ನಡೆಸಿದ್ದರು. ಆಫ್ರಿಕನ್ ಹಂದಿ ಜ್ವರವು ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಸಾಕು ಮತ್ತು ಕಾಡು ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸೋಂಕಿತ ಹಂದಿಗಳು ತೀವ್ರವಾದ ಹೆಮರಾಜಿಕ್ ಜ್ವರದಿಂದ ಬಳಲುತ್ತವೆ. ಈ ರೋಗ ಮೊದಲು 1920 ರಲ್ಲಿ ಆಫ್ರಿಕಾದಲ್ಲಿ ಕಂಡುಬಂತು.