ಲಖೀಪುರ್ (ಅಸ್ಸೋಂ): ಅಸ್ಸಾಂನ ಲಖೀಪುರ್ದಲ್ಲಿ ಆಫ್ರಿಕನ್ ಸ್ವೈನ್ ಫೀವರ್ (ಹಂದಿ ಜ್ವರ) ಸೋಂಕು ಕಂಡು ಬಂದ 1 ಸಾವಿರ ಹಂದಿಗಳನ್ನು ಪಶು ವೈದ್ಯಕೀಯ ತಂಡ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಖೀಪುರ್ ಜಿಲ್ಲಾ ಪಶು ಸಂಗೋಪನೆ ಮತ್ತು ಆರೋಗ್ಯ ಅಧಿಕಾರಿ ಕುಲಧರ್ ಸೈಕಿಯಾ ಈ ಕುರಿತು ಪ್ರತಿಕ್ರಿಯಿಸಿದ್ದು, ಲಖೀಪುರ ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡ ಹಿನ್ನೆಲೆ, 10 ಪಶು ವೈದ್ಯರು, ವಿದ್ಯುತ್ ಶಾಕ್ ನೀಡುವ ಮೂಲಕ 1 ಸಾವಿರ ಹಂದಿಗಳನ್ನು ಕೊಂದಿದ್ದಾರೆ. ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಉಲ್ಬಣಿಸಿದೆ. ಇದೇ ಕಾರಣದಿಂದ ಸಾವಿರ ಹಂದಿಗಳನ್ನು ಕೊಲ್ಲಬೇಕಾಯಿತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯದ 27 ಕೇಂದ್ರದಲ್ಲಿ ಈ ಸೋಂಕು ಪತ್ತೆಯಾಗಿದ್ದು, ಸರ್ಕಾರ ಇದುವರೆಗೂ 1,378 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಮಾಹಿತಿ ನೀಡಿದೆ. ಈ ವರ್ಷದ ಆರಂಭದಲ್ಲಿ ಅಸ್ಸೋಂ ಸರ್ಕಾರ ಏವಿಯನ್ ಇನ್ಫ್ಲುಯೆಂಜಾ ಮತ್ತು ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೇರೆ ರಾಜ್ಯಗಳಿಂದ ಹಂದಿ ಸೇರಿದಂತೆ ಕೋಳಿಗಳ ಪ್ರವೇಶಕ್ಕೆ ನಿಷೇಧ ವಿಧಿಸಿತು.
ಅಸ್ಸೋಂನ ಪಶು ಸಂಗೋಪನಾ ಸಚಿವ ಅತುಲ್ ಬೋರಾ ಮಾತನಾಡಿ, ಅಸ್ಸೋಂ ಮತ್ತು ಇತರ ಈಶಾನ್ಯ ರಾಜ್ಯದಲ್ಲಿ ಇನ್ಫ್ಲುಯೆಂಜಾ ಮತ್ತು ಆಫ್ರಿಕನ್ ಹಂದಿ ಜ್ವರ ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಅಗತ್ಯವಾಗಿದೆ ಎಂದು ತಿಳಿಸಿದರು.