ನವದೆಹಲಿ:ಅಕ್ರಮವಾಗಿ ನೆಲೆಸಿದ್ದ ನೈಜೀರಿಯನ್ ಪ್ರಜೆಗಳ ಬಂಧನದ ವೇಳೆ 100 ಕ್ಕೂ ಅಧಿಕ ಆಫ್ರಿಕನ್ ಪ್ರಜೆಗಳು ಒಟ್ಟಾಗಿ ಪೊಲೀಸ್ ಅಧಿಕಾರಿಗಳ ಮೇಲೆಯೇ ದಾಳಿಗೆ ಮುಂದಾದ ಘಟನೆ ದೆಹಲಿಯಲ್ಲಿ ಇಂದು ನಡೆದಿದೆ. ಬಳಿಕ ನಡೆದ ಹೈಡ್ರಾಮಾದಲ್ಲಿ ನಾಲ್ವರು ಅಕ್ರಮವಾಗಿ ವಾಸವಾಗಿದ್ದ ವಿದೇಶಿಯರನ್ನು ಬಂಧಿಸಲಾಗಿದೆ. ದೆಹಲಿಯ ನೆಬ್ ಸರೈನ್ ರಾಜು ಪಾರ್ಕ್ನಲ್ಲಿ ಅಕ್ರಮವಾಗಿ ನೆಲೆಸಿದ್ದ ನೈಜೀರಿಯನ್ ನಿವಾಸಿಗಳನ್ನು ಗಡಿಪಾರು ಮಾಡುವ ಸಲುವಾಗಿ ಶನಿವಾರ ಮಧ್ಯಾಹ್ನ ದೆಹಲಿಯ ನಾರ್ಕೊಟಿಕ್ ಸೆಲ್ ಪೊಲೀಸರು ತೆರಳಿದ್ದಾರೆ. ಮೂವರನ್ನು ಬಂಧಿಸಿ ಕರೆತರುವ ವೇಳೆ ಅದೇ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆಫ್ರಿಕನ್ ದೇಶಗಳ ಇತರೆ 100ಕ್ಕೂ ಅಧಿಕ ಜನರ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬಂಧನದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಆಫ್ರಿಕನ್ ನಿವಾಸಿಗಳು, ಪೊಲೀಸರ ಮೇಲೆರಗಲು ಶುರು ಮಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಬಂಧಿತ ಮೂವರು ಅಕ್ರಮ ನಿವಾಸಿಗಳಲ್ಲಿ ಇಬ್ಬರು ತಪ್ಪಿಸಿಕೊಂಡಿದ್ದಾರೆ. ನಂತರ ಅವರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಎರಡನೇ ಬಾರಿಗೆ ಇನ್ನಷ್ಟು ಪೊಲೀಸ್ ಬಲದೊಂದಿಗೆ ಅಕ್ರಮ ನಿವಾಸಿಗಳ ವಶಕ್ಕೆ ತೆರಳಿದಾಗ ಮತ್ತೊಮ್ಮೆ ವಿರೋಧಿಸಿದ್ದಾರೆ. ಆದರೂ ಬಿಡದ ಪೊಲೀಸರು ನಾಲ್ಕು ವಿದೇಶಿ ಪ್ರಜೆಗಳನ್ನು ಹುಡುಕಿ ಬಂಧಿಸಿದ್ದಾರೆ.