ನವದೆಹಲಿ: ಕಾಬೂಲ್ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗ, ಈ ಹಿಂದೆ ಆಫ್ಘನ್ನಲ್ಲಿದ್ದ ವಿದೇಶಿ ಭಯೋತ್ಪಾದಕರು ಜಮ್ಮುಕಾಶ್ಮೀರಕ್ಕೆ ನುಸುಳುವ ಸಾಧ್ಯತೆಯಿದೆ ಎಂದು ಸೇನಾ ಮುಖ್ಯಸ್ಥ ಎಂಎಂ ನರವಣೆ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಭಯೋತ್ಪಾದಕರು ಗಡಿ ಪ್ರವೇಶಿಸಲು ಯತ್ನಿಸಿದರೆ ಅವರನ್ನು ನಿಗ್ರಹಿಸಲು ಭಾರತೀಯ ಸಶಸ್ತ್ರ ಪಡೆಗಳು ಸಿದ್ಧವಾಗಿವೆ ಎಂದೂ ಅವರು ಹೇಳಿದ್ದಾರೆ. ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ನಾಗರಿಕ ಹತ್ಯೆಗಳು ಮತ್ತು ಆಫ್ಘನ್ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿದ್ದರ ನಡುವೆ ಸಂಬಂಧವಿದೆ ಎಂದು ಹೇಳಲು ಸಾಧ್ಯವಿಲ್ಲ. ಜಮ್ಮುಕಾಶ್ಮೀರದಲ್ಲಿ ಈ ಮೊದಲಿಗಿಂತಲೂ ಹೆಚ್ಚಾಗಿ ಭಯೋತ್ಪಾದನಾ ಚಟುವಟಿಕೆಗಳು ಉಲ್ಬಣಗೊಂಡಿವೆ. ಆದರೆ, ಇದಕ್ಕೂ ಆಫ್ಘನ್ಗೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ ಎಂದರು.
ಎರಡು ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ನಡೆಸುವಾಗ ವಿದೇಶಿ ಭಯೋತ್ಪಾದಕರು ಕಣಿವೆ ರಾಜ್ಯಕ್ಕೆ ಬಂದಿದ್ದಾರೆ. ಅವರು ಈಗಲೂ ಕಾಶ್ಮೀರದಲ್ಲಿ ಸಕ್ರಿಯರಾಗಿರಬಹುದು ಎಂದರು. ಆದರೆ, ಈಗ ಏನಾದ್ರೂ, ಭಯೋತ್ಪಾದಕರು ಭಾರತದ ಗಡಿ ಪ್ರವೇಶಿಸಲು ಯತ್ನಿಸಿದರೆ, ನಮ್ಮ ಸೇನೆ ಅವರನ್ನು ಎದುರಿಸಲು ಸಿದ್ಧವಾಗಿದೆ ಎಂದು ನರವಣೆ ಸ್ಪಷ್ಟಪಡಿಸಿದ್ದಾರೆ. ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದನೆ ಹರಡುವ ಸಾಧ್ಯತೆ ದಟ್ಟವಾಗಿವೆ.