ಕರ್ನಾಟಕ

karnataka

ETV Bharat / bharat

ವಿಶೇಷ ವಿಮಾನದಲ್ಲಿ ದೆಹಲಿ ತಲುಪಿದ ಅಫ್ಘಾನ್​ ಪ್ರಜೆಗಳು: ದುಸ್ಥಿತಿ ಬಿಚ್ಚಿಟ್ಟ ಬೆಂಗಳೂರಲ್ಲಿ ಬಿಬಿಎ ಓದುವ ವಿದ್ಯಾರ್ಥಿ - ತಾಲಿಬಾನ್​

ಅಫ್ಘಾನಿಸ್ತಾನದಲ್ಲಿ ಶಾಂತಿ ಇಲ್ಲ. ನಮಗೆ ಶಾಂತಿ ಬೇಕು. ನಮ್ಮ ದೇಶವನ್ನು ಜಗತ್ತು ಕೈಬಿಟ್ಟಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕಾಬೂಲ್‌ನಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಆಗಮಿಸಿದ ಅಫ್ಘಾನ್​ ಪ್ರಜೆಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Afghan nationals reach Delhi on special flight, say situation really bad there
ವಿಶೇಷ ವಿಮಾನದಲ್ಲಿ ದೆಹಲಿ ತಲುಪಿದ ಅಫ್ಘನ್ ಪ್ರಜೆಗಳು

By

Published : Aug 16, 2021, 4:39 PM IST

ನವದೆಹಲಿ:ಇಡೀ ಅಫ್ಘಾನಿಸ್ತಾನ ಇದೀಗ ತಾಲಿಬಾನ್​ ಉಗ್ರರ ಪಾಲಾಗಿದ್ದು, ತಮ್ಮ ತಮ್ಮ ಜೀವ ಉಳಿಸಿಕೊಳ್ಳಲು ಅಲ್ಲಿನ ಜನರು ಪಲಾಯನ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಕಾಬೂಲ್‌ನಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಆಗಮಿಸಿದ ಅಫ್ಘಾನ್​ ಪ್ರಜೆಗಳು ಅಲ್ಲಿನ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

'ಮಹಿಳೆಯರಿಗೆ ಇನ್ಮುಂದೆ ಯಾವುದೇ ಹಕ್ಕುಗಳಿರುವುದಿಲ್ಲ'

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನಿಂದ 129 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಭಾನುವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ವಿಮಾನದಿಂದ ಇಳಿದ ಮಹಿಳೆಯೊಬ್ಬರು "ಅಫ್ಘಾನಿಸ್ತಾನವನ್ನು ಜಗತ್ತು ಕೈಬಿಟ್ಟಿದೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ತಾಲಿಬಾನ್‌ಗಳು ನಮ್ಮನ್ನು ಕೊಲ್ಲಲಿದ್ದಾರೆ. ನಮ್ಮ ಸ್ನೇಹಿತರು ಉಗ್ರರ ಅಟ್ಟಹಾಸದಿಂದ ಸಾಯುತ್ತಿದ್ದಾರೆ. ನಮ್ಮ ಮಹಿಳೆಯರಿಗೆ ಇನ್ಮುಂದೆ ಯಾವುದೇ ಹಕ್ಕುಗಳಿರುವುದಿಲ್ಲ" ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನ್ ಪ್ರಜೆ

'ಮುಂದಿನ ನೂತನ ಸರ್ಕಾರದಡಿ ಶಾಂತಿ ನೆಲೆಸುವ ನಂಬಿಕೆಯಿದೆ'

ನನ್ನ ಕುಟುಂಬವು ಅಫ್ಘಾನಿಸ್ತಾನದಲ್ಲಿದೆ. ನನ್ನ ವಿಮಾನವನ್ನು ಮೊದಲೇ ಬುಕ್​ ಮಾಡಲಾಗಿತ್ತು. ಅಫ್ಘಾನಿಸ್ತಾನದಿಂದ ಭಾರತಕ್ಕೆ ಇದ್ದ ಕೊನೆಯ ವಿಮಾನ ಇದಾಗಿತ್ತು. ಹೀಗಾಗಿ ನಾನು ಬಂದೆ. ಹಿಂಸಾಚಾರ ನಡೆಯುತ್ತಿರುವುದನ್ನ ನಾನು ನನ್ನ ಕಣ್ಣಾರೆ ನೋಡಲಿಲ್ಲ. ಆದರೆ ಅನೇಕ ಜನರು ಕಾಬೂಲನ್ನು ತೊರೆಯುತ್ತಿರುವುದನ್ನು, ಅಲ್ಲಿಂದ ತಪ್ಪಿಸಿಕೊಳ್ಳಲು ಕಾಬೂಲ್​ ಏರ್​​ಪೋರ್ಟ್​ಗೆ ಜನರು ಓಡೋಡಿ ಬರುತ್ತಿರುವುದನ್ನು, ಬ್ಯಾಂಕುಗಳಿಗೆ ಹಣ ಪಡೆಯಲು ಧಾವಿಸುತ್ತಿರುವುದನ್ನು ನೋಡಿದೆ. ನನ್ನ ಕುಟುಂಬಸ್ಥರು ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ. ಮುಂದಿನ ನೂತನ ಸರ್ಕಾರದಡಿ ಶಾಂತಿ ನೆಲೆಸಲಿದೆ ಎಂಬ ನಂಬಿಕೆಯಿದೆ ಎಂದು ಬೆಂಗಳೂರಿನಲ್ಲಿ ಬಿಬಿಎ ಓದುತ್ತಿರುವ ವಿದ್ಯಾರ್ಥಿಯೊಬ್ಬ ನಿನ್ನೆ ದೆಹಲಿಗೆ ಬಂದಿಳಿದ ಬಳಿಕ ಮಾತನಾಡಿದ್ದಾನೆ.

ಇದನ್ನೂ ಓದಿ: ಕಾಬೂಲ್‌ ಏರ್‌ಪೋರ್ಟ್‌ನಲ್ಲಿ ಗುಂಡಿನ ದಾಳಿಗೆ ಐವರು ಬಲಿ: ಪ್ರಾಣ ರಕ್ಷಿಸಿಕೊಳ್ಳಲು ಅಫ್ಘನ್ನರ ಪರದಾಟ

'ನಮಗೆ ಸ್ವಾತಂತ್ರ್ಯ ಬೇಕು'

ನನ್ನ ಸಂಬಂಧಿಕರು ಅಫ್ಘಾನಿಸ್ತಾನದ ಹೆರಾತ್​​ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಎಲ್ಲವನ್ನು ಮುಚ್ಚಲಾಗಿದೆ. ಅಲ್ಲಿ ಶಾಂತಿ ಇಲ್ಲ. ಮಹಿಳೆಯರು-ಹೆಣ್ಣು ಮಕ್ಕಳು ಬುರ್ಕಾ, ಮುಸುಕು ಇಲ್ಲದೇ ಹೊರಗೆ ಹೋಗುವಂತಿಲ್ಲ. ನಮಗೆ ಸ್ವಾತಂತ್ರ್ಯ ಬೇಕು ಎಂದು ಮತ್ತೊಬ್ಬ ಅಫ್ಘನ್ ಪ್ರಜೆ ಅಬ್ದುಲ್ ಕಾಜೀರ್ ಹೇಳುತ್ತಾರೆ. ಅಲ್ಲಿನ ಸ್ಥಿತಿ ತೀರಾ ಅಪಾಯಕಾರಿಯಾಗಿದೆ. ನಮಗೆ ಮುಸುಕು ಹಾಕಲು ಇಷ್ಟವಿಲ್ಲ. ನನಗಲ್ಲಿ ಶಾಂತಿಯಿಂದ ಊಟ-ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಇನ್ನೊಬ್ಬ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಾಮಾನ್ಯ ನಾಗರಿಕರಲ್ಲದೆ, ಹಲವಾರು ಅಫ್ಘನ್ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೂಡ ಭಾನುವಾರ ದೆಹಲಿಗೆ ಬಂದಿದ್ದಾರೆ. ನಾನು ನನ್ನ ದೇಶವನ್ನು ತೊರೆಯಲು ಬಯಸುವುದಿಲ್ಲ. ಸಭೆಯೊಂದರಲ್ಲಿ ಭಾಗಿಯಾಗುವ ಸಲುವಾಗಿ ಬಂದಿದ್ದೆ. ಮತ್ತೆ ಅಲ್ಲಿಗೆ ತೆರಳುವೆ. ಅಲ್ಲಿನ ಹಿಂಸಾಚಾರದಲ್ಲಿ ನನ್ನ ಸಂಬಂಧಿಯೊಬ್ಬನನ್ನು ಕಳೆದು ಕೊಂಡಿದ್ದೇನೆ. ನಿಜಕ್ಕೂ ದೇಶದ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿದೆ ಎಂದು ಪಾಕ್ತಿಯಾ ಪ್ರಾಂತ್ಯದ ಸಂಸದ ಸೈಯದ್​ ಹಸನ್​ ತಿಳಿಸಿದ್ದಾರೆ.

ABOUT THE AUTHOR

...view details