ನವದೆಹಲಿ :ಅಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿಕೊಳ್ಳುತ್ತಿದ್ದಂತೆಯೇ, ಭಾರತದಲ್ಲಿ ವಾಸಿಸುತ್ತಿರುವ ಅಘ್ಫಾನ್ ಪ್ರಜೆಗಳು ತಮ್ಮ ಕುಟುಂಬ ಹಾಗೂ ಸ್ನೇಹಿತರ ಬಗ್ಗೆ ಹೆಚ್ಚು ಚಿಂತೆಗೀಡಾಗಿದ್ದಾರೆ.
ಭಾರತದಲ್ಲಿರುವ ಅಫ್ಘಾನಿಗಳಲ್ಲಿ ಆತಂಕ.. ಈ ಬಗ್ಗೆ ಮಾತನಾಡಿರುವ ನದೀಮ್, ನಾವು 2015ರ ಡಿಸೆಂಬರ್ನಿಂದ ಇಲ್ಲಿಯೇ ವಾಸಿಸುತ್ತಿದ್ದೇವೆ. ಅಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಕಾಬೂಲ್‌ನಲ್ಲಿ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ನನ್ನ ಕುಟುಂಬಸ್ಥರು ಹೇಳಿದ್ದಾರೆ ಎಂದರು.
ಅಘ್ಘಾನ್ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ನನ್ನ ಕುಟುಂಬಸ್ಥರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಾಹು ನಮ್ಮ ಕುಟುಂಬದವರನ್ನೆಲ್ಲ ಸುರಕ್ಷಿತವಾಗಿರಿಸಿರಲಿ ಎಂದು ಲಜಪತ್ ನಗರದ ಅಂಗಡಿ ಮಾಲೀಕ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಶಾಂತಿಯುತ ಅಧಿಕಾರ ಹಸ್ತಾಂತರವಾಗಲಿದೆ: ಆಂತರಿಕ ವ್ಯವಹಾರಗಳ ಸಚಿವ
ವಿದ್ಯಾಭ್ಯಾಸಕ್ಕೆಂದು ಬಂದಿರುವ ಅಘ್ಫಾನ್ ವಿದ್ಯಾರ್ಥಿಗಳು, ನಮ್ಮ ವೀಸಾ ಅವಧಿ ಮುಂದಿನ ತಿಂಗಳು ಮುಗಿದು ಹೋಗುತ್ತದೆ. ದೀರ್ಘಾವಧಿವರೆಗೆ ನಾವು ಇಲ್ಲಿಯೇ ವಾಸ್ತವ್ಯ ಹೂಡಲು ನಮಗೆ ಭಾರತ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.