ನವದೆಹಲಿ : ಭಾರತದಲ್ಲಿನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಅಕ್ಟೋಬರ್ 1 ರಿಂದ ತನ್ನ ಕಾರ್ಯಾಚರಣೆಯನ್ನು ಮುಚ್ಚುವುದಾಗಿ ಘೋಷಿಸಿದೆ. ರಾಯಭಾರ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಾದ ಬೆಂಬಲ ಮತ್ತು ಸಂಪನ್ಮೂಲಗಳ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ತಿಳಿಸಿದೆ.
ಈ ಕುರಿತು ಅಧಿಕೃತ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿ, "ನವದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಲು ತೀವ್ರವಾದ ದುಃಖ ಮತ್ತು ನಿರಾಶೆಯಾಗಿದೆ. ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ಐತಿಹಾಸಿಕ ಬಾಂಧವ್ಯ ಮತ್ತು ದೀರ್ಘಕಾಲದ ಸಹಭಾಗಿತ್ವವನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ಮುಂದಿನ ಸಮಸ್ಯೆಗಳನ್ನು ಪರಿಗಣಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ 22 ವರ್ಷಗಳಲ್ಲಿ ಅಫ್ಘಾನಿಸ್ತಾನಕ್ಕೆ ನೀಡಿದ ಬೆಂಬಲಕ್ಕಾಗಿ ಅಫ್ಘಾನಿಸ್ತಾನದ ರಾಯಭಾರಿ ಮತ್ತು ರಾಜತಾಂತ್ರಿಕರು ಭಾರತ ಹಾಗೂ ಭಾರತ ಸರ್ಕಾರಕ್ಕೆ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ" ಎಂದು ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ವಿಶ್ವದಾದ್ಯಂತ ಆಫ್ಘನ್ ರಾಯಭಾರ ಕಚೇರಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂಬುದು ಗಮನಾರ್ಹ ಅಂಶ. ಇಲ್ಲಿಯವರೆಗೆ ರಾಯಭಾರಿ ಕಚೇರಿಯ ಕೆಲಸವನ್ನು ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರ ಅವಧಿಯಲ್ಲಿ ನೇಮಕಗೊಂಡ ರಾಯಭಾರಿ ಫರೀದ್ ಮಾಮುಂಜಾಯ್ ನೋಡಿಕೊಳ್ಳುತ್ತಿದ್ದರು. ಆದರೆ, ಕಳೆದ ಮೂರು ತಿಂಗಳಿಂದ ಅವರ ಕುರುಹುಗಳೇ ಇರಲಿಲ್ಲ. ಬಳಿಕ ಅವರು ಲಂಡನ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ :ಷರತ್ತುಗಳ ಮೇಲೆ ಹೆಣ್ಣುಮಕ್ಕಳು ಶಾಲೆಗೆ ಹೋಗಬಹುದು : ತಾಲಿಬಾನ್ ಅಧಿಕಾರಿ