ನವದೆಹಲಿ:ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದೆ. ಕಳೆದ ಕೆಲ ತಿಂಗಳಿಂದ ನಿಯಂತ್ರಣಕ್ಕೆ ಸಿಗದ ರೀತಿಯಲ್ಲಿ ಹರಡುತ್ತಿದ್ದು, ಅನೇಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಹತೋಟಿಗೆ ಬರುತ್ತಿಲ್ಲ. ಡೆಡ್ಲಿ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹೇಗೆ ಹರಡುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಈ ಮಾಹಿತಿ ಹೊರಹಾಕಿದ್ದಾರೆ. ಕೋವಿಡ್ ಲಕ್ಷಣ ರಹಿತ(ಪಾಸಿಟಿವ್ ರೋಗಿ) ವ್ಯಕ್ತಿಯಿಂದ ವೈರಾಣು ಸುತ್ತಮುತ್ತಲಿನ ಅನೇಕರಿಗೆ ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ಅವರು ತಿಳಿಸಿದ್ದು, ಬಾಯಿ ಹಾಗೂ ಮೂಗಿನಿಂದ ಹೊರಬರುವ ಹನಿಗಳಿಂದ(ಲಾಲಾರಸ) ಈ ಸೋಂಕು ತಗುಲುವ ಸಾಧ್ಯತೆ ಇದೆ ಎಂದಿದ್ದಾರೆ. ಪ್ರಮುಖವಾಗಿ ಮನೆಯೊಳಗೆ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಇದು ಹೆಚ್ಚಾಗಿ ಹರಡುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
ಕೋವಿಡ್ ಸೋಂಕಿತ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ಹೊರಬೀಳುವ ವೈರಾಣುಗಳು 10 ಮೀಟರ್ವರೆಗೆ ಸೋಂಕು ತಗುಲಿಸಬಹುದು. ಆದರೆ, ಈ ವೈರಸ್ ವ್ಯಕ್ತಿಯ ದೇಹದೊಳಗೆ ಹೋದ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಲು ಸುಮಾರು ಎರಡು ವಾರಗಳ ಸಮಯವಿರುತ್ತದೆ ಎಂದಿದ್ದಾರೆ. ಇದರ ನಡುವೆ ಆ ವ್ಯಕ್ತಿಯಿಂದ ಮತ್ತಷ್ಟು ಜನರಿಗೆ ಸೋಂಕು ತಗುಲುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ತಿಳಿಸಿದೆ.