ಲಕ್ನೋ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲೆತ್ನಿಸಿ ಸುಮಾರು 9 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಹೆಚ್ಚಾಗಲು ಕಾರಣರಾಗಿದ್ದಾರೆ ಎಂದು 300 ವಕೀಲರ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವಕೀಲರೊಬ್ಬರು ಮನೆಗೆ ತೆರಳುತ್ತಿದ್ದಾಗ ಅವರ ಕಾರು ಹಾಗು ಬೈಕ್ ನಡುವೆ ಅಪಘಾತ ನಡೆದಿತ್ತು. ಇದರಿಂದ ಬೈಕ್ ಸವಾರನಿಗೆ ಗಾಯಗಳಾಗಿತ್ತು. ಸ್ಥಳೀಯರು ವಕೀಲರ ಕಾರು ಸುತ್ತುವರೆದು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ವಕೀಲರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು.
ಠಾಣೆಯಲ್ಲಿ ಪೊಲೀಸರು ವಕೀಲರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಉಳಿದ ವಕೀಲರು ಕೂಡಲೇ ಜಮಾಯಿಸಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಪ್ರತಿಭಟನೆ ಆರಂಭಿಸಿದ್ದರು. ಇದರಿಂದ ಸತತ 9 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಘಟನೆಗೆ ಕಾರಣರಾದ ಎಲ್ಲಾ ವಕೀಲರ ವಿರುದ್ಧವೂ ಪೊಲೀಸರು ಕೇಸು ಹಾಕಿದ್ದಾರೆ.