ನವದೆಹಲಿ: ಭಾರತದ ನೂತನ ಅಟಾರ್ನಿ ಜನರಲ್ ಆಗಿ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿ ಆರ್ ವೆಂಟಕರಮಣಿ ಅವರನ್ನು ನೇಮಕ ಮಾಡಲಾಗಿದೆ. ಬುಧವಾರ ವೆಂಕಟರಮಣಿ ಎಜಿ ಆಗಿ ನೇಮಕವಾಗಿದ್ದು, ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳವರೆಗೆ ಇರಲಿದೆ.
ನಾಳೆಗೆ (ಸೆ.30) ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಅವಧಿ ಮುಕ್ತಾಯವಾಗೊಳ್ಳುವ ಹಿನ್ನೆಲೆ ಆರ್ ವೆಂಕಟರಮಣಿ ಅವರನ್ನು ನೇಮಿಸಿರುವ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆ ನೊಟಿಫಿಕೇಷನ್ ಪ್ರಕಾರ, 'ಭಾರತದ ಅಟಾರ್ನಿ ಜನರಲ್ ಆಗಿ ಆರ್ ವೆಂಕಟರಮಣಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕಕ್ಕೆ ಅಂಕಿತ ಹಾಕುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿತ್ತು. ಅದರ ಪ್ರಕಾರ ಬುಧವಾರ ಅವರ ನೇಮಕವಾಗಿದೆ.
ಸಂವಿಧಾನದ ಪರಿಚ್ಛೇದ 76 (1) ಅಡಿ ಕೇಂದ್ರ ಸರ್ಕಾರದ ಸಂಪುಟದ ನಿರ್ಧಾರದಂತೆ ರಾಷ್ಟ್ರಪತಿಗಳಿಗೆ ಭಾರತದ ಅಟಾರ್ನಿ ಜನರಲ್ ಅವರನ್ನು ನೇಮಿಸುವ ಅಧಿಕಾರ ಇರುತ್ತದೆ. ಮುಕುಲ್ ರೋಹಟಗಿ ಅವರು ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿದ ಬೆನ್ನಲ್ಲೇ ಆರ್ ವೆಂಕಟರಮಣಿ ಅವರಿಗೆ ಈ ಸ್ಥಾನ ಒಲಿದು ಬಂದಿದೆ.
ಇದನ್ನೂ ಓದಿ:ದೆಹಲಿಯ ಏಮ್ಸ್ ನಿರ್ದೇಶಕ ಸ್ಥಾನಕ್ಕೆ ಕನ್ನಡಿಗ ನೇಮಕ: ಕೇಂದ್ರದಿಂದ ಆದೇಶ