ವಾರಾಣಸಿ: ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಏರ್ಲೈನ್ಸ್ ವಿಮಾನವನ್ನು ಲ್ಯಾಂಡ್ ಮಾಡಲು ಅವಕಾಶ ನಿರಾಕರಿಸಲಾಯಿತು. ಲ್ಯಾಂಡಿಂಗ್ ಸಮಸ್ಯೆ ಅನುಭವಿಸಿದ ಕಾರಣ ಗಾಳಿಯಲ್ಲೇ ಸುಮಾರು ಅರ್ಧಗಂಟೆಗಳ ಕಾಲ ವಿಮಾನ ಹಾರಾಟ ನಡೆಸಲಾಯಿತು. ಮಂಜುಕವಿದ ಹಿನ್ನೆಲೆ ಲ್ಯಾಂಡಿಂಗ್ಗೆ ಅವಕಾಶ ನೀಡದ ಕಾರಣ ವಿಮಾನ ಕಡೆಗೆ ಮುಂಬೈಗೆ ಮರಳಿತು. ಪ್ರತಿಕೂಲ ಹವಾಮಾನದಿಂದಾಗಿ ಈ ಸಮಸ್ಯೆ ಉದ್ಭವಿಸಿದ್ದು, ಮುಂಬೈಗೆ ವಿಮಾನವನ್ನು ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಳಿಯಲ್ಲೇ ಹಾರಾಟ: ಸ್ಪೈಸ್ ಜೆಟ್ನ ವಿಮಾನ ಎಸ್ಜಿ201 ವಿಮಾನ ಮುಂಬೈನಿಂದ ವಾರಾಣಸಿಗೆ ಹೊರಟಿತ್ತು. ವಿಮಾನದಲ್ಲಿ 108 ಪ್ರಯಾಣಿಕರಿದ್ದರು. ವಾರಾಣಸಿಯಲ್ಲಿ ವಿಮಾನ ಕೆಳಗಿಳಿಸಲು ಉತ್ತಮ ವಾತಾವರಣ ಇಲ್ಲದ ಹಿನ್ನೆಲೆ ಅರ್ಧ ಗಂಟೆಗಳ ಕಾಲ ಗಾಳಿಯಲ್ಲೇ ಹಾರಾಟ ನಡೆಸಿ ಮತ್ತೆ ಮುಂಬೈಗೆ ವಿಮಾನ ವಾಪಸ್ ಆಗಿದೆ.