ಬೆಂಗಳೂರು :ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಗೊಂಡಿರುವ ಆದಿತ್ಯ ಎಲ್ 1 ಉಪಗ್ರಹ ಯಶಸ್ವಿಯಾಗಿ ಗುರಿಯತ್ತ ಸಾಗುತ್ತಿದೆ. ಈ ಅನುಕ್ರಮದಲ್ಲಿ ಆದಿತ್ಯ ಎಲ್ 1 ಸೆಲ್ಫಿ ತೆಗೆದುಕೊಂಡ ಫೋಟೋವೊಂದನ್ನು ಇಸ್ರೋ ಹಂಚಿಕೊಂಡಿದೆ. ಈ ಸೆಲ್ಫಿಯಲ್ಲಿ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಒಂದೇ ಫ್ರೇಮ್ನಲ್ಲಿ ಕಾಣಬಹುದಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋವನ್ನು ಇಸ್ರೋ ಎಕ್ಸ್ (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದೆ. ಈಗ ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗ್ತಿದೆ.
ಆದಿತ್ಯ ಎಲ್1ರ ಎರಡನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿ: ಆದಿತ್ಯ ಎಲ್1 ಸೂರ್ಯನ ರಹಸ್ಯಗಳನ್ನು ಅನ್ವೇಷಿಸುವ ಗುರಿಯತ್ತ ಸಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೋ ಸೆಪ್ಟಂಬರ್ 5 ಮಂಗಳವಾರದಂದು ಎರಡನೇ ಭೂಕಕ್ಷೆ ಮೇಲೆ ಕಾಲಿಡುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದೆ. ಪ್ರಸ್ತುತ ಆದಿತ್ಯ ಎಲ್-1 ಉಪಗ್ರಹವು 282 km x 40225 km ಹೊಸ ಕಕ್ಷೆಯನ್ನು ಪ್ರವೇಶಿಸಿದೆ. ಮುಂದಿನ ಕಕ್ಷೆ ಏರಿಸುವ ತಂತ್ರವನ್ನು ಸೆಪ್ಟೆಂಬರ್ 10 ರಂದು ನಡೆಸಲಾಗುವುದು ಎಂದು ಇಸ್ರೋ ಸಾಮಾಜಿಕ ಮಾಧ್ಯಮ ವೇದಿಕೆ X ಮೂಲಕ ತಿಳಿಸಿತ್ತು. ಸೆಪ್ಟೆಂಬರ್ 3ರಂದು ಮೊದಲ ಕಕ್ಷೆಯನ್ನು ಏರಿಸುವ ಕುಶಲತೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.
ಶನಿವಾರ (ಸೆಪ್ಟೆಂಬರ್ 2, 2023) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SHAAR) ಪಿಎಸ್‌ಎಲ್‌ವಿ-ಸಿ 57 ನಿಂದ 'ಆದಿತ್ಯ-ಎಲ್ 1' ಉಪಗ್ರಹವನ್ನು ಉಡಾವಣೆ ಮಾಡಲಾಯಿತು. 63 ನಿಮಿಷಗಳ ಸುದೀರ್ಘ ಪ್ರಯಾಣದ ನಂತರ 1480.7 ಕೆಜಿ ತೂಕದ ಉಪಗ್ರಹ ಭೂಕಕ್ಷೆಯನ್ನು ಪ್ರವೇಶಿಸಿತ್ತು. 'ಆದಿತ್ಯ-ಎಲ್1' ಬಾಹ್ಯಾಕಾಶ ನೌಕೆಯು 16 ದಿನಗಳ ಕಾಲ ಭೂಮಿಯ ಸುತ್ತ ಸುತ್ತಲಿದೆ. ಅದರ ನಂತರ, ಅದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಗೊತ್ತುಪಡಿಸಿದ L1 ಪಾಯಿಂಟ್ (ಲ್ಯಾಗ್ರೇಂಜ್ ಪಾಯಿಂಟ್ 1) ಗುರಿಯನ್ನು 125 ದಿನಗಳ ಪ್ರಯಾಣದ ನಂತರ ತಲುಪುತ್ತದೆ.
ಆದಿತ್ಯ L1 ಮಿಷನ್ ಉದ್ದೇಶವೇನು : ಲಾಗ್ರೇಂಜ್ ಬಿಂದುವಿನಲ್ಲಿ, ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಬಲವು ಸಮಾನವಾಗಿರುತ್ತದೆ. ಇದರಿಂದ ಅಲ್ಲಿ ಸೂರ್ಯನ ಬಗ್ಗೆ ದೀರ್ಘಕಾಲ ಸಂಶೋಧನೆ ನಡೆಸಲು ಸಾಧ್ಯವಾಗಲಿದೆ. ಗ್ರಹಣವನ್ನು ಲೆಕ್ಕಿಸದೆ ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲು ಅವಕಾಶವಿದೆ. ಕರೋನಾಗ್ರಫಿ ಉಪಕರಣದ ಸಹಾಯದಿಂದ ಸೌರ ವಾತಾವರಣವನ್ನು ಆಳವಾಗಿ ಅಧ್ಯಯನ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ, ಆಸ್ಟ್ರೇಲಿಯಾ ಮತ್ತು ಇತರ ಬಾಹ್ಯಾಕಾಶ ಸಂಸ್ಥೆಗಳ ಸಹಾಯದಿಂದ ಇಸ್ರೋ ಸೂರ್ಯನ ಬಗ್ಗೆ ಅಧ್ಯಯನವನ್ನು ಕೈಗೊಂಡಿದೆ.
ಓದಿ:ಚಂದ್ರಯಾನ-3 ಲ್ಯಾಂಡ್ ಆದ ಸ್ಥಳದ ಚಿತ್ರ ಸೆರೆಹಿಡಿದ ನಾಸಾ