ಬೆಂಗಳೂರು:ಸೂರ್ಯನ ಸಮಗ್ರ ಅಧ್ಯಯನಕ್ಕಾಗಿ ಶನಿವಾರ ಉಡ್ಡಯನಗೊಂಡಿರುವ ಆದಿತ್ಯ-ಎಲ್1 ಗಗನನೌಕೆ ಆರೋಗ್ಯವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ರವಿವಾರ) ಮಾಹಿತಿ ನೀಡಿದೆ. ಭೂಮಿಯ ಮೊದಲ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದೂ ಹೇಳಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಭಾರತದ ಮೊದಲ ಸೌರ ಅಧ್ಯಯನ ನೌಕೆಯೂ ಹೌದು. ಇಂದು ನೌಕೆಯ ಸ್ಥಿತಿಗತಿ ಬಗ್ಗೆ ಇಸ್ರೋ ಮಾಹಿತಿ ಹಂಚಿಕೊಂಡಿದೆ. ''ಆದಿತ್ಯ-ಎಲ್1 ಉಪಗ್ರಹವು ಆರೋಗ್ಯಯುತವಾಗಿದೆ ಮತ್ತು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ'' ಎಂದು ತಿಳಿಸಿದೆ.
ಮುಂದುವರೆದು, ''ಬೆಂಗಳೂರಿನಲ್ಲಿ ಐಎಸ್ಟಿಆರ್ಎಸಿ (ISTRAC) ಕೇಂದ್ರದಿಂದ ಭೂಮಿಯ ಮೊದಲ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆಯನ್ನು (Earth bound maneuvre) ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಮುಂದಿನ ಎರಡನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಸೆಪ್ಟೆಂಬರ್ 5ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆಯಲಿದೆ'' ಎಂದು ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ:ಚಂದ್ರಯಾನ-3: ಕೆಲಸ ಮುಗಿಸಿ 'ಸ್ಲೀಪ್ ಮೋಡ್'ಗೆ ಜಾರಿದ ಪ್ರಗ್ಯಾನ್; ಸೆಪ್ಟೆಂಬರ್ 22ರಿಂದ ಮತ್ತೆ ಕಾರ್ಯಾರಂಭದ ಭರವಸೆ
ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ಆದಿತ್ಯ-ಎಲ್1 ನೌಕೆಯು ಪಿಎಸ್‌ಎಲ್‌ವಿ ರಾಕೆಟ್ನಿಂದ ನಭಕ್ಕೆ ಚಿಮ್ಮಿತ್ತು. ನಂತರ ರಾಕೆಟ್ನಿಂದ ಯಶಸ್ವಿಯಾಗಿ ಬೇರ್ಪಟ್ಟು ಕಕ್ಷೆಗೆ ಸೇರಿತ್ತು. ಭೂಮಿಯಿಂದ ಸೂರ್ಯನ ಕಡೆಗೆ ಸರಿಸುಮಾರು 1.5 ಲಕ್ಷ ಕಿಲೋ ಮೀಟರ್ ದೂರ ಕ್ರಮಿಸಿ, ಬಾಹ್ಯಾಕಾಶದಲ್ಲಿ ನಿಲ್ಲುತ್ತದೆ. ಇದು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ ಸುಮಾರು ಶೇ.1ರಷ್ಟು ಮಾತ್ರ ಆಗಿದ್ದು, ಅಲ್ಲಿಗೆ ಉಪಗ್ರಹ ತಲುಪಲು 125 ದಿನಗಳು ಹಿಡಿಯಲಿದೆ.
ಸೂರ್ಯನ ಹೊರಗಿನ ವಾತಾವರಣದ ಅಧ್ಯಯನವನ್ನು ಬಾಹ್ಯಾಕಾಶ ನೌಕೆ ಮಾಡಲಿದೆ. ಇದರಲ್ಲಿ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್, ಸೋಲಾರ್ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್, ಸೋಲಾರ್ ಲೋ ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್, ಹೈ ಎನರ್ಜಿ ಎಲ್1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್, ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪರಿಮೆಂಟ್, ಆದಿತ್ಯಗಾಗಿ ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್, ಮ್ಯಾಗ್ನೆಟೋಮೀಟರ್ ಎಂಬ ಏಳು ಪೇಲೋಡ್‌ಗಳು ಇದೆ. ಆದರೆ, ಆದಿತ್ಯ-ಎಲ್1 ಸೂರ್ಯನ ಮೇಲೆ ಇಳಿಯಲ್ಲ ಮತ್ತು ಸೂರ್ಯ ಸಮೀಪವೂ ಹೋಗುವುದಿಲ್ಲ ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-3ರ ಯಶಸ್ವಿಯಾದ ನಂತರ ಇಸ್ರೋ ಮಹತ್ವದ ಸೂರ್ಯನ ಅಧ್ಯಯನಕ್ಕೆ ನೌಕೆಯನ್ನು ಉಡಾವಣೆ ಮಾಡಿದ್ದು, ಜಗತ್ತಿನ ಗಮನ ಸೆಳೆದಿದೆ. ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿದ ಹೆಗ್ಗಳಿಕೆ ಇಸ್ರೋ ಪಾತ್ರವಾಗಿದೆ. ಸುಮಾರು 11 ದಿನಗಳ ಬಳಿಕ ಚಂದ್ರನ ಮೇಲೆ ರಾತ್ರಿಯಾದ ಕಾರಣ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್ ನಿದ್ರೆಗೆ ಜಾರಿವೆ. ಸೆಪ್ಟೆಂಬರ್ 22ರಂದು ಮತ್ತೆ ರೋವರ್ ತನ್ನ ಕಾರ್ಯಾರಂಭಿಸುವ ನಿರೀಕ್ಷೆಯಲ್ಲಿ ಇಸ್ರೋ ವಿಜ್ಞಾನಿಗಳು ಇದ್ದಾರೆ. ಚಂದ್ರನ ಒಂದು ರಾತ್ರಿ ಅಥವಾ ಹಗಲು ಭೂಮಿಯ 14 ದಿನಗಳಿಗೆ ಸಮನಾಗಿದೆ.
ಇದನ್ನೂ ಓದಿ:Explained: ಆದಿತ್ಯ-ಎಲ್1 ನೌಕೆಯಲ್ಲಿವೆ 7 ಉಪಕರಣಗಳು; ಇವುಗಳ ಕಾರ್ಯವೇನು?