ನವದೆಹಲಿ:ಲೋಕಸಭೆ ಕಾಂಗ್ರೆಸ್ ಸದಸ್ಯ ಅಧೀರ್ ರಂಜನ್ ಚೌಧರಿ ಅವರ ಅಮಾನತು ಆದೇಶವನ್ನು ಬುಧವಾರ ಹಿಂಪಡೆಯಲಾಗಿದೆ. ಈ ಕುರಿತು ಲೋಕಸಭೆಯ ಸೆಕ್ರೆಟರಿಯೇಟ್ ಅಧಿಸೂಚನೆ ಹೊರಡಿಸಿದ್ದು, "ಅಧೀರ್ ರಂಜನ್ ಚೌಧರಿ ಅವರ ಆಗಸ್ಟ್ 10ರಿಂದ ಜಾರಿಯಲ್ಲಿದ್ದ ಅಮಾನತನ್ನು ಆಗಸ್ಟ್ 30ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ'' ಎಂದು ತಿಳಿಸಿದೆ.
ಕಲಾಪದಲ್ಲಿ ಅಶಿಸ್ತಿನ ವರ್ತನೆ ಆರೋಪದ ಮೇಲೆ ಅಧೀರ್ ರಂಜನ್ ಅವರನ್ನು ಅಮಾನತುಗೊಳಿಸಿ, ವಿಶೇಷಾಧಿಕಾರ ಸಮಿತಿಯ ವಿಚಾರಣೆ ಎದುರಿಸಲು ಸೂಚಿಸಲಾಗಿತ್ತು. ಈ ವರದಿ ಬರುವವರಿಗೆ ಅಮಾನತು ಜಾರಿಯಲ್ಲಿ ಇರುತ್ತದೆ ಎಂದು ತಿಳಿಸಲಾಗಿತ್ತು. ಇಂದು ಅವರು ಲೋಕಸಭೆಯ ವಿಶೇಷಾಧಿಕಾರ ಸಮಿತಿಯ ಮುಂದೆ ಹಾಜರಾದರು. ಸದನದಲ್ಲಿ ತಮ್ಮ ವರ್ತನೆಗೆ ವಿಷಾದ ವ್ಯಕ್ತಪಡಿಸಿದರು. ಅಂತೆಯೇ, ಸಮಿತಿಯು ಸರ್ವಾನುಮತದಿಂದ ಅವರ ಅಮಾನತು ತೆಗೆದುಹಾಕುವ ನಿರ್ಣಯ ಅಂಗೀಕರಿಸಿತು. ಜೊತೆಗೆ ತಕ್ಷಣವೇ ಈ ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ರವಾನಿಸಲಾಯಿತು. ಇದರ ನಂತರ ಅಮಾನತು ವಾಪಸ್ ಪಡೆಯಲಾಗಿದೆ.
ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಸಿಂಗ್ ಅಧ್ಯಕ್ಷತೆಯ ಸಮಿತಿ ಮುಂದೆ ಹಾಜರಾದ ಅಧೀರ್ ರಂಜನ್, ''ನಾನು ಎಂದಿಗೂ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ಹೊಂದಿಲ್ಲ. ಈ ಹಿಂದಿನ ಹೇಳಿಕೆಗೆ ವಿಷಾದಿಸುತ್ತೇನೆ'' ಎಂದು ತಿಳಿಸಿದರು. ಈ ಕುರಿತು ಸಮಿತಿಯ ಸದಸ್ಯರೊಬ್ಬರು ಪ್ರತಿಕ್ರಿಯಿಸಿ, ''ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತು ಹಿಂಪಡೆಯುವ ನಿರ್ಣಯವನ್ನು ಸಮಿತಿ ಅಂಗೀಕರಿಸಿದೆ'' ಎಂದು ಸ್ಪಷ್ಟಪಡಿಸಿದ್ದಾರೆ.