ನವದೆಹಲಿ: ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಎಡವಟ್ಟಿನ ಹೇಳಿಕೆಗಳು ತಮ್ಮದೇ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿವೆ. ಪ್ರತಿಪಕ್ಷವಾಗಿ ಕಾಂಗ್ರೆಸ್ ಕಳೆದ ಮೂರು ದಿನಗಳಿಂದ ಸಂಸತ್ತಿನೊಳಗೆ ಮತ್ತು ಬೀದಿಗಿಳಿದು ಹೋರಾಟ ಮಾಡುತ್ತಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿಯನ್ನು ಇಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಇಂತಹ ಹೊತ್ತಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಅಧೀರ್ ರಂಜನ್ ಚೌಧರಿ ಹೇಳಿಕೆಯು ಕಾಂಗ್ರೆಸ್ ಹೋರಾಟವನ್ನು ಮಣ್ಣು ಪಾಲು ಆಗುವಂತೆ ಮಾಡುತ್ತಿದೆ.
ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುವ ಅಧೀರ್ ರಂಜನ್ ಚೌಧರಿ, ರಾಜ್ಯ ಕಾಂಗ್ರೆಸ್ ಪಾಲಿಗೆ ಹಿರಿಯ ಮುಖ. ಆದರೆ, ಸಂಸತ್ತಿನೊಳಗೆ ಅಥವಾ ಸಂಸತ್ತಿನ ಹೊರಗೆ ಹೇಳಿಕೆಗಳನ್ನು ನೀಡುವಾಗ ಯಾವಾಗಲೂ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ. ಈ ಹೇಳಿಕೆಗಳು ವಿವಾದ ಸ್ವರೂಪ ಪಡೆದಾಗ ಹಿಂದಿ ಸರಿಯಾಗಿ ಗೊತ್ತಿಲ್ಲ ಎನ್ನುತ್ತಾ ಕ್ಷಮಿಸಿ ಎಂದು ಹೇಳುತ್ತಾರೆ.
ಈಗ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ ಹೇಳಿಕೆ ಬಗ್ಗೆಯೂ ಹಿಂದಿಯನ್ನೇ ಅಧೀರ್ ರಂಜನ್ ಚೌಧರಿ ಮುಂದಿಟ್ಟಿದ್ದಾರೆ. 'ರಾಷ್ಟ್ರಪತಿ' ಬದಲಿಗೆ 'ರಾಷ್ಟ್ರಪತ್ನಿ' ಹೇಳಿದ್ದು ಹಿಂದಿ ಸಮಸ್ಯೆಯಿಂದಾಗಿ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಏಕೆಂದರೆ ಸ್ವಲ್ಪ ಹಿಂದಿ ತಿಳಿದಿರುವ ಯಾವುದೇ ಬಾಂಗ್ಲಾ ಮಾತನಾಡುವ ವ್ಯಕ್ತಿ ಸಹ 'ರಾಷ್ಟ್ರಪತ್ನಿ' ಮತ್ತು 'ರಾಷ್ಟ್ರಪತಿ' ನಡುವಿನ ವ್ಯತ್ಯಾಸವನ್ನು ತಿಳಿಯದೇ ಇರಲಾರ.
ಹೀಗಾಗಿ ತಮಗೆ ಹಿಂದಿ ಸಮಸ್ಯೆ ಎಂಬ ಅಧೀರ್ ಅವರ ಸಬೂಬು ಎಲ್ಲ ಸಮಯದಲ್ಲೂ ಅನ್ವಯಿಸಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿರ್ ಅವರನ್ನು 'ಹೊರೆ' ಎಂದು ಪರಿಗಣಿಸಿದರೆ ಅತಿಶಯೋಕ್ತಿಯಾಗದು ಎಂಬ ಮಾತುಗಳು ಕೇಳಿ ಬರುತ್ತಿವೆ.