ನವದೆಹಲಿ:ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ರಾಷ್ಟ್ರಪತ್ನಿ” ಎಂದು ಕರೆಯುವ ಮೂಲಕ ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಇದೀಗ ಕ್ಷಮೆಯಾಚನೆ ಮಾಡಿದ್ದಾರೆ. ರಾಷ್ಟ್ರಪತಿಗಳಿಗೆ ಪತ್ರ ಬರೆದು ಕ್ಷಮೆಯಾಚನೆ ಮಾಡಿರುವ ಅಧೀರ್ ರಂಜನ್ ಚೌಧರಿ, ಮಾತನಾಡುವ ತವಕದಲ್ಲಿ ಈ ಶಬ್ದ ನನ್ನ ಬಾಯಿಂದ ಹೊರಬಂದಿದೆ. ಇದಕ್ಕೋಸ್ಕರ ನಾನು ಕ್ಷಮೆಯಾಚನೆ ಮಾಡುತ್ತೇನೆ. ಜೊತೆಗೆ ನನ್ನ ಕ್ಷಮೆ ಒಪ್ಪಿಕೊಳ್ಳುವಂತೆ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ನೀವು ಹೊಂದಿರುವ ಸ್ಥಾನದ ಬಗ್ಗೆ ವಿವರಣೆ ನೀಡುತ್ತಿದ್ದ ವೇಳೆ ಬಾಯ್ತಪ್ಪಿನಿಂದಾಗಿ ತಪ್ಪು ಪದ ಬಳಕೆ ಮಾಡಿದ್ದೇನೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸಲು ನಾನು ಈ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಸಂಸದರು ಸಂಸತ್ನಲ್ಲಿ ನಿನ್ನೆ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರು.