ನವದೆಹಲಿ:ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಗುರುವಾರ ಲೋಕಸಭೆಯಿಂದ ಅಮಾನತು ಮಾಡಲಾಗಿದೆ. "ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ದುರ್ವರ್ತನೆ" ಆರೋಪದ ಮೇಲೆ ವಿಶೇಷಾಧಿಕಾರಗಳ ಸಮಿತಿಯ ವರದಿ ಬರುವವರೆಗೆ ಅಮಾನತು ಕ್ರಮ ಕೈಗೊಳ್ಳಲಾಗಿದೆ.
ಅಧೀರ್ ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ. ಪಶ್ಚಿಮ ಬಂಗಾಳದ ಬರ್ಹಾಂಪೋರ್ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಅಮಾನತು ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮಂಡಿಸಿದರು. ಇದನ್ನು ಸದನವು ಧ್ವನಿ ಮತಕ್ಕೆ ಹಾಕುವ ಮೂಲಕ ಅಂಗೀಕರಿಸಿತು.
ಪ್ರಲ್ಹಾದ್ ಜೋಶಿ ಮಾತನಾಡಿ, "ಸದನವು ಅಧೀರ್ ರಂಜನ್ ಚೌಧರಿಯವರ ಉದ್ದೇಶಪೂರ್ವಕ ಮತ್ತು ಪುನರಾವರ್ತಿತ ದುಷ್ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ಸದನ ಮತ್ತು ಅಧ್ಯಕ್ಷರ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿ, ದುರ್ವರ್ತನೆ ವಿಷಯವನ್ನು ಹೆಚ್ಚಿನ ತನಿಖೆಗಾಗಿ ಸದನದ ವಿಶೇಷಾಧಿಕಾರಗಳ ಸಮಿತಿಗೆ ವಹಿಸಲು ನಿರ್ಧರಿಸಿ, ಸದನಕ್ಕೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು ತನ್ನ ವರದಿ ಸಲ್ಲಿಸುವವರೆಗೆ ಚೌಧರಿ ಅವರನ್ನು ಸದನದ ಸೇವೆಯಿಂದ ಅಮಾನತುಗೊಳಿಸಬೇಕು'' ಎಂದು ಹೇಳಿದರು.
ಇದನ್ನೂ ಓದಿ:PM Modi: ಬೆಂಗಳೂರಿನಲ್ಲಿ ಯುಪಿಎ ಅಂತಿಮ ವಿಧಿವಿಧಾನ ನಡೆದಿದೆ; 2028ರಲ್ಲಿ ಮತ್ತೆ ಅವಿಶ್ವಾಸ ನಿರ್ಣಯ ತನ್ನಿ: ಮೋದಿ ವಾಗ್ದಾಳಿ
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕುರಿತು ಅಧೀರ್ ರಂಜನ್ ಚೌಧರಿ ಮಾಡಿದ್ದ ಕೆಲವು ಟೀಕೆಗಳನ್ನು ಕಡತದಿಂದ ತೆಗೆದುಹಾಕಲಾಗಿತು. ಅಧೀರ್ ರಂಜನ್ ಚೌಧರಿ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಲ್ಹಾದ್ ಜೋಶಿ ಅವರು ಕ್ಷಮೆ ಯಾಚಿಸಬೇಕೆಂದು ಅಧೀರ್ ರಂಜನ್ ಚೌಧರಿಗೆ ಒತ್ತಾಯಿಸಿದರು.
ಇದೇ ವೇಳೆ, ಬಿಜೆಪಿ ಸದಸ್ಯ ವೀರೇಂದ್ರ ಅವಸ್ತಿ ಮತ್ತು ಅಧೀರ್ ರಂಜನ್ ಚೌಧರಿ ನಡವಳಿಕೆ ಬಗ್ಗೆ ಸ್ಪೀಕರ್ ಕೂಡ ಆಕ್ಷೇಪ ವ್ಯಕ್ತಪಡಿಸಿದರು. ಆಗ ವೀರೇಂದ್ರ ಅವಸ್ತಿ ತಮ್ಮ ನಡವಳಿಕೆಗೆ ಕುರಿತು ಕ್ಷಮೆ ಯಾಚಿಸಿದರು. ಆದರೆ, ಪ್ರಧಾನಿ ವಿರುದ್ಧದ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವಸ್ತಿ ಹೇಳಿದರು.
ಅವಿಶ್ವಾಸ ನಿರ್ಣಯಕ್ಕೆ ಸೋಲು:ಮಣಿಪುರ ಹಿಂಸಾಚಾರ ಕುರಿತಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು. ನಿಲುವಳಿ ಮೇಲೆ ಸತತ ದಿನಗಳ ಕಾಲ ಚರ್ಚೆ ನಡೆಯಿತು. ಇಂದು ಪ್ರಧಾನಿ ಮೋದಿ ಸುದೀರ್ಘವಾದ ಭಾಷಣ ಮಾಡಿದರು. ಇದಾದ ನಂತರ ಧ್ವನಿ ಮತಕ್ಕೆ ಅವಿಶ್ವಾಸ ನಿರ್ಣಯವನ್ನು ಹಾಕಲಾಯಿತು. ಅಂತಿಮವಾಗಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.
ಇದನ್ನೂ ಓದಿ:No Confidence Motion: ಮೋದಿ ಸರ್ಕಾರದ ವಿರುದ್ಧದ ಪ್ರತಿಪಕ್ಷಗಳ 'ಅವಿಶ್ವಾಸ ನಿರ್ಣಯ'ಕ್ಕೆ ಸೋಲು