ನವದೆಹಲಿ: ಜನಪ್ರತಿನಿಧಿಗಳಿಗೆ ಸಂವಿಧಾನದ ಪರಿಚ್ಛೇದ 19(2) ರ ಅಡಿ ಸೂಚಿಸಲಾದ ಯಾವುದೇ ಹೆಚ್ಚಿನ ನಿರ್ಬಂಧಗಳನ್ನು ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲೆ ವಿಧಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಪರಿಚ್ಛೇದ 19 (2)ರ ಅಡಿಯಲ್ಲಿ ನಿರ್ಬಂಧಗಳು ಸಮಗ್ರವಾಗಿವೆ ಎಂದು ಸರ್ವೋಚ್ಛ ನ್ಯಾಯಾಲಯ ಒತ್ತಿ ಹೇಳಿದೆ.
ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳಿಗೆ ವಾಕ್ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಹುದೇ ಎಂಬ ಕುರಿತಾಗಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಎಸ್.ಎ.ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ತೀರ್ಪು ನೀಡಿದೆ. ಐವರು ನ್ಯಾಯಮೂರ್ತಿಗಳಲ್ಲಿ ನ್ಯಾ.ಎಸ್.ಎ.ನಜೀರ್, ನ್ಯಾ. ಬಿ.ಆರ್. ಗವಾಯಿ, ನ್ಯಾ. ಎ.ಎಸ್. ಬೋಪಣ್ಣ, ನ್ಯಾ.ವಿ.ರಾಮಸುಬ್ರಮಣ್ಯಂ ಒಂದೇ ಸಮಾನ ತೀರ್ಪು ನೀಡಿದ್ದಾರೆ. ಆದರೆ, ಐದರಲ್ಲಿ ಒಬ್ಬರಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಪ್ರತ್ಯೇಕ ತೀರ್ಪು ನೀಡಿದ್ದಾರೆ.
ಬಹುಮತದ ತೀರ್ಪನ್ನು ಪ್ರಕಟಿಸಿದ ನ್ಯಾ.ರಾಮಸುಬ್ರಮಣಿಯನ್, ಸಂವಿಧಾನದ 19(2)ನೇ ಪರಿಚ್ಛೇದದ ಅಡಿಯಲ್ಲಿ ಉಲ್ಲೇಖಿಸಲಾದ ವಾಕ್ ಸ್ವಾತಂತ್ರ್ಯದ ವಿರುದ್ಧ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಸುಪ್ರೀಂ ನೋಟು ಅಮಾನ್ಯೀಕರಣದ ನಿರ್ಧಾರ ಎತ್ತಿ ಹಿಡಿದಿಲ್ಲ, ಇದು ಬಹುಮತದ ತೀರ್ಪಲ್ಲ: ಕಾಂಗ್ರೆಸ್
ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಲು ಪರಿಚ್ಛೇದ 19 (2)ದಲ್ಲಿನ ಆಧಾರಗಳು ಸಮಗ್ರವಾಗಿವೆ. ಪರಿಚ್ಛೇದ 19 (2)ರಲ್ಲಿ ಕಂಡು ಬರದ ಹೆಚ್ಚಿನ ನಿರ್ಬಂಧಗಳನ್ನು ಪರಿಚ್ಛೇದ 19 (1) ಮೂಲಕ ನೀಡಲಾದ ಹಕ್ಕನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಪ್ಟಪಡಿಸಿದರು. ಜೊತೆಗೆ ಸಚಿವರ ಹೇಳಿಕೆ ಆಧರಿಸಿ ಸರ್ಕಾರದ ಮೇಲೆ ನಿಷ್ಠುರವಾಗಿ ಆರೋಪಿಸಲು ಸಾಧ್ಯವಿಲ್ಲ. ತಮ್ಮ ಹೇಳಿಕೆಗೆ ಸಚಿವರೇ ಹೊಣೆಗಾರರಾಗಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ.
ಪ್ರತ್ಯೇಕ ತೀರ್ಪು ನೀಡಿದ ನ್ಯಾ. ನಾಗರತ್ನ:ಪ್ರತ್ಯೇಕ ತೀರ್ಪು ನೀಡಿದ ನ್ಯಾ.ನಾಗರತ್ನ ಅವರು, ಸಮಾನತೆ ಮತ್ತು ಭ್ರಾತೃತ್ವದ ಮೂಲಕ್ಕೆ ದ್ವೇಷದ ಮಾತುಗಳು ಧಕ್ಕೆ ಉಂಟುಮಾಡುತ್ತವೆ. ಅವಹೇಳನಕಾರಿ ಭಾಷಣಗಳನ್ನು ಪರಿಶೀಲಿಸಲು ಮತ್ತು ನಾಗರಿಕರಲ್ಲಿ ಸಾಮರಸ್ಯವನ್ನು ಉತ್ತೇಜಿಸಲು ಮೂಲಭೂತ ಕರ್ತವ್ಯಗಳನ್ನು ಅನುಸರಿಬೇಕು. ಆದರೆ, ಜನಪ್ರತಿನಿಧಿಗಳ ವಾಕ್ ಸ್ವಾತಂತ್ರ್ಯದ ಮೂಲ ಹಕ್ಕಿನ ಮೇಲೆ ನ್ಯಾಯಾಲಯವು ಯಾವುದೇ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ವಿಚಾರಣೆಯ ಹಿನ್ನೆಲೆ:2016ರಲ್ಲಿ ನಡೆದಿದ್ದ ಸಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತರ ಬಗ್ಗೆ ಆಗಿನ ಉತ್ತರ ಪ್ರದೇಶದ ಸಚಿವ ಅಜಂ ಖಾನ್ ನೀಡಿದ ಹೇಳಿಕೆ ಕುರಿತಾದ ವಿವಾದವು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆ ವರ್ಷ ಜುಲೈ ತಿಂಗಳಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್ ಬಳಿಯ ಹೆದ್ದಾರಿಯಲ್ಲಿ ತಾಯಿ ಮತ್ತು ಮಗಳು ಸಾಮೂಹಿಕ ಅತ್ಯಾಚಾರ ನಡೆಸಿತ್ತು. ಈ ಪ್ರಕರಣವನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಅಲ್ಲದೇ, ಸಾಮೂಹಿಕ ಅತ್ಯಾಚಾರ ಪ್ರಕರಣವು ರಾಜಕೀಯ ಪಿತೂರಿ ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಅಜಂ ಖಾನ್ ವಿರುದ್ಧ ಕೇಸ್ ದಾಖಲಿಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು. ಈ ಅರ್ಜಿ ವಿಚಾರಣೆಯು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು.2017ರ ಅಕ್ಟೋಬರ್ನಲ್ಲಿ ಮೂವರು ನ್ಯಾಯಾಧೀಶರ ಪೀಠವು ಜನಪ್ರತಿನಿಧಿಗಳ ಹೇಳಿಕೆ ಕುರಿತಾಗಿ ವಿವಿಧ ವಿಷಯಗಳನ್ನು ನಿರ್ಧರಿಸಲು ಸಂವಿಧಾನ ಪೀಠಕ್ಕೆ ವಿಚಾರಣೆಯನ್ನು ಶಿಫಾರಸು ಮಾಡಿತ್ತು. ಇದರಲ್ಲಿ ಜನಪ್ರತಿನಿಧಿಗಳು ಅಥವಾ ಸಚಿವರು ಸೂಕ್ಷ್ಮ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ವಾಕ್ ಸ್ವಾತಂತ್ರ್ಯದ ಹಕ್ಕು ಪಡೆದುಕೊಳ್ಳಬಹುದೇ ಎಂಬುವುದು ಸಹ ಒಳಗೊಂಡಿತ್ತು.
ವಾದ- ಪ್ರತಿವಾದ:ಅರ್ಜಿದಾರರ ಪರ ವಕೀಲ ಕಾಳೀಶ್ವರಂ ರಾಜ್ ವಾದ ಮಂಡಿಸಿದರು. ಜನಪ್ರತಿನಿಧಿಗಳಿಗೆ ನೀತಿ ಸಂಹಿತೆ ಜಾರಿ ಮಾಡುವ ಅಗತ್ಯವಿದ್ದು, ಹಿಂದಿನ ತೀರ್ಪುಗಳು ಕೇವಲ ದ್ವೇಷದ ಮಾತುಗಳಿಗೆ ಮಾತ್ರ ಸಂಬಂಧಿಸಿವೆ ಎಂದು ಪೀಠದ ಎದುರು ತಮ್ಮ ವಾದ ಮಂಡಿಸಿದರು. ಅಟಾರ್ನಿ ಜನರಲ್ ಆರ್ ವೆಂಕಟ್ರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಹಿಂದಿನ ತೀರ್ಪುಗಳು ಈ ಬಗ್ಗೆ ವಿವರವಾಗಿ ವ್ಯವಹರಿಸಿವೆ ಮತ್ತು ಈ ಪೀಠದ ಮುಂದೆ ಉಲ್ಲೇಖವು ಶೈಕ್ಷಣಿಕ ಸ್ವರೂಪದ್ದಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ:ಮಹಿಳೆಯರಿಗೆ ಗೌರವವಿಲ್ಲ.. ಪಕ್ಷ ತೊರೆದ ತಮಿಳುನಾಡು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್