ನವದೆಹಲಿ: ಹಿಂಡೆನ್‌ಬರ್ಗ್ ರಿಸರ್ಚ್ ಹೆಸರಿನ ಸಂಸ್ಥೆಯು ತನ್ನ ವಿರುದ್ಧ ಮಾಡಲಾದ ಆರೋಪಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಡಲು ಅದಾನಿ ಗ್ರೂಪ್, ಅಮೆರಿಕ ಮೂಲದ ಕಾನೂನು ಸಲಹಾ ಸಂಸ್ಥೆ ವಾಚ್‌ಟೆಲ್ ಅನ್ನು ನೇಮಿಸಿಕೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬ್ರಿಟಿಷ್ ಮಾಧ್ಯಮಗಳ ಪ್ರಕಾರ ಅದಾನಿ ಗ್ರೂಪ್ ವಾಚ್‌ಟೆಲ್, ಲಿಪ್ಟನ್, ರೋಸೆನ್ ಮತ್ತು ಕಾಟ್ಜ್‌ನ ಹಿರಿಯ ವಕೀಲರನ್ನು ಸಂಪರ್ಕಿಸಿದ್ದು, ತನ್ನ ಸಮೂಹ ಎದುರಿಸುತ್ತಿರುವ ಬಿಕ್ಕಟ್ಟನ್ನು ಹೇಗೆ ಎದುರಿಸಬಹುದು ಎಂಬ ಬಗ್ಗೆ ಸಲಹೆ ಕೇಳಿದೆ. ನ್ಯೂಯಾರ್ಕ್ ಮೂಲದ ಕಾನೂನು ಸಂಸ್ಥೆ ವಾಚ್ ಟೆಲ್ ಕಾರ್ಪೊರೇಟ್ ಕಾನೂನಿನಲ್ಲಿ ಪರಿಣತಿಯನ್ನು ಹೊಂದಿದೆ. ಇದು ನಿಯಮಿತವಾಗಿ ದೊಡ್ಡ ಮತ್ತು ಸಂಕೀರ್ಣ ವಹಿವಾಟುಗಳನ್ನು ನಿರ್ವಹಿಸುತ್ತದೆ.
ಅದಾನಿ ಗ್ರೂಪ್ ಸಮೂಹವು ತನ್ನ ಷೇರು ಬೆಲೆಗಳಲ್ಲಿ ಹಸ್ತಕ್ಷೇಪ ಮಾಡಿ, ವಂಚನೆಗಳನ್ನು ಎಸಗಿದೆ ಎಂದು ಆರೋಪಿಸಿದ ವರದಿಯ ನಂತರ ಕಳೆದ ವಾರದಲ್ಲಿ, ಅದಾನಿ ಗ್ರೂಪ್‌ನ ಷೇರುಗಳ ಬೆಲೆಗಳು ಗಣನೀಯವಾಗಿ ಕುಸಿದಿವೆ. ಹಿಂಡೆನ್‌ಬರ್ಗ್ ಒಂದು ಅನೈತಿಕ ಶಾರ್ಟ್ ಸೆಲ್ಲರ್ ಕಂಪನಿ ಎಂದು ಅದಾನಿ ಗ್ರೂಪ್ ವಾಗ್ದಾಳಿ ನಡೆಸಿದೆ. ನ್ಯೂಯಾರ್ಕ್ ಮೂಲದ ಹಿಂಡೆನ್‌ಬರ್ಗ್ ವರದಿಯು ಸುಳ್ಳೇ ಹೊರತು ಬೇರೇನೂ ಅಲ್ಲ ಎಂದು ಹೇಳಿದೆ. ಅದಾನಿ ಸಮೂಹದ ಷೇರು ಬೆಲೆಗಳ ಕುಸಿತ ಸತತವಾಗಿ ಮುಂದುವರಿದ ಕಾರಣದಿಂದ ಸಮೂಹದ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ಸಂಪೂರ್ಣವಾಗಿ ಸಬ್ಸ್ಕ್ರೈಬ್ ಆಗಿದ್ದ 20,000 ಕೋಟಿ ರೂ. ಫಾಲೋ ಆನ್ ಸಾರ್ವಜನಿಕ ಆಫರ್ ರದ್ದುಗೊಳಿಸುವಂತೆ ಮಾಡಿದೆ.
ಹಿಂಡೆನ್‌ಬರ್ಗ್ ರಿಸರ್ಚ್‌ನ ಇತ್ತೀಚಿನ ವರದಿಯು ಕೇವಲ ಒಂದು ನಿರ್ದಿಷ್ಟ ಕಂಪನಿಯ ಮೇಲಿನ ದಾಳಿಯಲ್ಲ. ಇದು ಭಾರತ, ಅದರ ಬೆಳವಣಿಗೆಯ ಕಥೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ನಡೆಸಲಾದ ವ್ಯವಸ್ಥಿತ ದಾಳಿ ಎಂದು ಜನವರಿ 29 ರಂದು ಅದಾನಿ ಗ್ರೂಪ್ 413 ಪುಟಗಳ ಸುದೀರ್ಘ ವರದಿಯಲ್ಲಿ ಹೇಳಿದೆ.