ನವದೆಹಲಿ :ಜೈಪುರ, ಗುವಾಹಟಿ ಮತ್ತು ತಿರುವನಂತಪುರಂನಲ್ಲಿರುವ ಖಾಸಗೀಕರಣಗೊಂಡ ಮೂರು ಏರ್ಪೋರ್ಟ್ಗಳನ್ನು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಸ್ವಾಧೀನಪಡಿಸಿಕೊಳ್ಳಲು ಅದಾನಿ ಗ್ರುಪ್ ಗಡುವನ್ನು ವಿಸ್ತರಿಸಲು ಮನವಿ ಮಾಡಿದೆ. ವಾಯುಯಾನ ಕ್ಷೇತ್ರದಲ್ಲಿ ಕೋವಿಡ್ ಎರಡನೇ ಅಲೆ ಪರಿಣಾಮವನ್ನು ಉಲ್ಲೇಖಿಸಿ ಗಡುವನ್ನು ಆರು ತಿಂಗಳವರೆಗೆ ಮುಂದೂಡುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ತಿಳಿಸಿದೆ.
‘ಫೋರ್ಸ್ ಮಜೂರ್’ ಎನ್ನುವುದು ಒಪ್ಪಂದದಲ್ಲಿನ ಸಾಮಾನ್ಯ ಷರತ್ತು. ಇದು ನಿಯಂತ್ರಣ ಮೀರಿದ ಅಸಾಮಾನ್ಯ ಘಟನೆ ಅಥವಾ ಯುದ್ಧ, ಗಲಭೆಗಳು, ಸಾಂಕ್ರಾಮಿಕ ರೋಗಗಳ ಅವಧಿಯಲ್ಲಿ ಬಿಕ್ಕಟ್ಟಿನಿಂದ ಸರ್ಕಾರಿ ಹಾಗೂ ಖಾಸಗಿಯವರನ್ನು ಮುಕ್ತಗೊಳಿಸುವ ಕಾಯ್ದೆಯಾಗಿದೆ. ಸದ್ಯ ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ತಿಂಗಳ ಅಂತ್ಯದಲ್ಲಿ ಎಎಐ ಮಂಡಳಿ ಸಭೆ ಸೇರುತ್ತದೆ.
ಜನವರಿ 19 ರಂದು ಜೈಪುರ, ಗುವಾಹಟಿ ಮತ್ತು ತಿರುವನಂತಪುರಂನ ಮೂರು ವಿಮಾನ ನಿಲ್ದಾಣಗಳನ್ನು 50 ವರ್ಷಗಳ ಅವಧಿಗೆ ಅದಾನಿ ಗುಂಪಿಗೆ ಎಎಐ ಗುತ್ತಿಗೆ ನೀಡಿದೆ. 2020ರ ಸೆಪ್ಟೆಂಬರ್‌ನಲ್ಲಿ ಮೂರು ವಿಮಾನ ನಿಲ್ದಾಣಗಳ ಒಪ್ಪಂದದ ಪತ್ರಕ್ಕೆ ಅದಾನಿ ಟೀಂ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರ ಸಹಿ ಹಾಕಿತ್ತು. 2020ರ ಫೆಬ್ರವರಿಯಲ್ಲಿ, ಅದಾನಿ ಗ್ರುಪ್ ಅಹಮದಾಬಾದ್, ಲಖನೌ ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಸ್ವಾಧೀನವನ್ನು ಮುಂದೂಡಲು ಫೋರ್ಸ್ ಮಜೂರ್ ಅನ್ನು ಆಹ್ವಾನಿಸಿತ್ತು.
ಬಳಿಕ ಎಎಐ ಗಡುವನ್ನು ಆರು ತಿಂಗಳು ವಿಸ್ತರಿಸಿತು. ವಿಶೇಷವೆಂದರೆ, ಎಎಐ ತನ್ನ ಆರು ವಿಮಾನ ನಿಲ್ದಾಣಗಳನ್ನು 2019ರಲ್ಲಿ ಬಿಡ್ ಮಾಡಿತ್ತು. ಅದಾನಿ ಸಮೂಹವು ಅಹಮದಾಬಾದ್, ಲಖನೌ, ಬೆಂಗಳೂರು, ತಿರುವನಂತಪುರಂ, ಜೈಪುರ ಮತ್ತು ಗುವಾಹಟಿಯ ಎಲ್ಲಾ ಆರು ವಿಮಾನ ನಿಲ್ದಾಣಗಳನ್ನು ಗುತ್ತಿಗೆ ಪಡೆದಿದೆ.