ಜೈಪುರ್: ರಾಜಸ್ಥಾನದ ಹಲವಾರು ಕೈಗಾರಿಕಾ ರಂಗಗಳಲ್ಲಿ ತಮ್ಮ ಸಮೂಹ 35 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ದೇಶದ ಬೃಹತ್ ಕೈಗಾರಿಕಾ ಸಮೂಹ ಅದಾನಿ ಗ್ರೂಪ್ ಚೇರಮನ್ ಗೌತಮ್ ಅದಾನಿ ಹೇಳಿದರು. ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಆಕರ್ಷಣೆಗಾಗಿ ರಾಜ್ಯ ಸರ್ಕಾರ ಆಯೋಜಿಸಿರುವ ಇನ್ವೆಸ್ಟ್ ರಾಜಸ್ಥಾನ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಸ್ಥಾನದಲ್ಲಿ ಇನ್ನೂ 7 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದೇವೆ. ಇಲ್ಲಿ ನಮ್ಮ 10 ಸಾವಿರ ಮೆಗಾವ್ಯಾಟ್ನ ಸೋಲಾರ್ ಪಾರ್ಕ್ ಆರಂಭವಾಗಲಿದೆ. ಜೈಪುರ್ ಏರ್ಪೋರ್ಟ್ನಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರೀನ್ ಹೈಡ್ರೊಜನ್ ಉತ್ಪಾದಿಸಲು ಅದಾನಿ ಗ್ರೂಪ್ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಕೆಲಸ ಮಾಡಲಿದೆ ಎಂದು ಅದಾನಿ ತಿಳಿಸಿದರು.
ಮುಖ್ಯಮಂತ್ರಿ ಗೆಹ್ಲೋಟ್ ಅವರ ಕಾರಣದಿಂದಲೇ ಇದೆಲ್ಲವೂ ಸಾಧ್ಯವಾಗುತ್ತಿದೆ. ಶಕ್ತಿ ಉಡಾನ್ ಯೋಜನಾ, ಕೋಚಿಂಗ್ ಅನುಕೃತಿ ಯೋಜನಾ ಮುಂತಾದುವು ಅತ್ಯುತ್ತಮವಾಗಿವೆ. ಅತ್ಯಂತ ಕಡಿಮೆ ಸಮಯದಲ್ಲಿ ಸರ್ಕಾರವು ಅತಿಹೆಚ್ಚು ಸೌಲಭ್ಯಗಳನ್ನು ನೀಡಿದೆ. ಬಂಡವಾಳ ಹೂಡಿಕೆಗಾಗಿ ಸರ್ಕಾರದ ಉತ್ತೇಜನಾ ಕ್ರಮಗಳಿಂದ ಹೂಡಿಕೆಯು ಸುಲಭವಾಗುತ್ತಿದೆ ಎಂದು ಅವರು ಹೇಳಿದರು.