ಮುಂಬೈ :ರಾಡ್ನಿಂದ ಹಲ್ಲೆ ಮಾಡಿದ್ದಲ್ಲದೇ, ತನ್ನ ಮೇಲೆ ಆ್ಯಸಿಡ್ ದಾಳಿಗೂ ಯತ್ನ ನಡೆಸಿದ್ದಾರೆಂದು ಬಾಲಿವುಡ್ ನಟಿ ಪಾಯಲ್ ಘೋಷ್ ಹೇಳಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಮೇಲೆ ಅತ್ಯಾಚಾರದ ಆರೋಪ ಮಾಡಿ ನಟಿ ಪಾಯಲ್ ಸುದ್ದಿಯಲ್ಲಿದ್ದರು.
ಮುಸುಕುಧಾರಿ ದುಷ್ಕರ್ಮಿಗಳ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿ, ಆ್ಯಸಿಡ್ ದಾಳಿಗೆ ಯತ್ನ ನಡೆಸಿದೆ ಎಂದು ಹೇಳಿಕೊಂಡಿರುವ ಅವರು, ಅದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದಾರೆ. ಅದೀಗ ವೈರಲ್ ಆಗಿದೆ.
ನಟಿ ಪಾಯಲ್ ಘೋಷ್ ಮೇಲೆ ರಾಡ್ನಿಂದ ಹಲ್ಲೆ.. ಆ್ಯಸಿಡ್ ದಾಳಿಗೆ ಯತ್ನ?
ನಿನ್ನೆ ರಾತ್ರಿ 10 ಗಂಟೆ ವೇಳೆ ಪಾಯಲ್ ಘೋಷ್ ಔಷಧಿ ತೆಗೆದುಕೊಂಡು ಬರುವ ಉದ್ದೇಶದಿಂದ ಮನೆಯಿಂದ ಹೊರಗಡೆ ಬಂದಿದ್ದರು. ಈ ವೇಳೆ ಕೆಲವರು ನನ್ನ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದು, ಕೈಗೆ ಪೆಟ್ಟು ಬಿದ್ದಿದೆ. ಅವರು ಕೈಯಲ್ಲಿ ಬಾಟಲಿ ಹಿಡಿದುಕೊಂಡಿದ್ದರು. ಬಹುಶಃ ಅದು ಆ್ಯಸಿಡ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ನಟಿ ಹೇಳಿಕೊಂಡಿದ್ದೇನು?
ನಾನು ಪಾಯಲ್ ಘೋಷ್. ನಿನ್ನೆ ರಾತ್ರಿ ಔಷಧಿ ತೆಗೆದುಕೊಂಡು ಬರುವ ಉದ್ದೇಶದಿಂದ ಹೊರಗಡೆ ಬಂದು, ಡ್ರೈವರ್ ಸೀಟ್ನಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದೆನು. ಈ ವೇಳೆ ಕೆಲವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಕೈಯಲ್ಲಿ ಬಾಟಲಿ ಇತ್ತು. ಅದು ಆ್ಯಸಿಡ್ ಇರಬಹುದು ಎಂದು ನಾನು ಅಂದುಕೊಂಡಿದ್ದೇನೆ.
ಈ ವೇಳೆ ರಾಡ್ನಿಂದ ಹಲ್ಲೆ ಮಾಡಲು ಅವರು ಯತ್ನಿಸಿದ್ದಾರೆ. ಘಟನೆ ವೇಳೆ ನಾನು ಜೋರಾಗಿ ಕಿರುಚಿಕೊಂಡಿರುವೆ ಎಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡುತ್ತೇನೆ ಎಂದು ತಿಳಿಸಿದ್ದಾರೆ. ನಟಿ ಪಾಯಲ್ ಘೋಷ್ ಕೈಗೆ ಗಾಯವಾಗಿರುವ ಫೋಟೋ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗಾಯಗೊಂಡಿರುವ ನಟಿ ಪಾಯಲ್ ನಿವಾಸಕ್ಕೆ ಕೇಂದ್ರ ಸಚಿವ ರಾಮದಾಸ್ ಅಠವಲೆ ಭೇಟಿ ಮಾಡಿ, ಆರೋಗ್ಯ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿರಿ:ಗೋವಾ ಪ್ರಯಾಣದ ವೇಳೆ ರಸ್ತೆ ಅಪಘಾತ: ನಟಿ, ಬಾಯ್‌ಫ್ರೆಂಡ್ ದುರ್ಮರಣ
ನಟಿ ಪಾಯಲ್ ಘೋಷ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ತೆಲಗು, ಕನ್ನಡ ಹಾಗೂ ಹಿಂದಿಯ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಸದ್ಯ ಮುಂಬೈನಲ್ಲಿ ವಾಸವಾಗಿದ್ದಾರೆ. ಇದರ ಮಧ್ಯೆ ಕಳೆದ ವರ್ಷ ಕೇಂದ್ರ ಸಚಿವ ರಾಮದಾಸ್ ಅಠವಲೆ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗೆ ಸೇರ್ಪಡೆಯಾಗಿದ್ದಾರೆ.