ಹೈದರಾಬಾದ್ (ತೆಲಂಗಾಣ): ತೆಲುಗಿನ ಖ್ಯಾತ ನಟಿ ಹಾಗೂ ಮಾಜಿ ಶಾಸಕಿ ಜಯಸುಧಾ ಬಿಜೆಪಿ ಸೇರುವ ಸಾಧ್ಯತೆ ಇದೆ. ಕೇಸರಿ ಪಕ್ಷದ ನಾಯಕತ್ವವು ತಮ್ಮನ್ನು ಸಂಪರ್ಕಿಸಿದರೆ ಸೇರಲು ಸಿದ್ಧ ಎಂದು ಅವರೇ ಹೇಳಿದ್ದಾರೆ.
ಆಗಸ್ಟ್ 21ರಂದು ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವ ಶಾಸಕ ಕೋಮಟಿ ರೆಡ್ಡಿ ರಾಜಗೋಪಾಲ್ ರೆಡ್ಡಿ ಬಿಜೆಪಿಗೆ ಸೇರಲಿದ್ದಾರೆ. ಇದೇ ವೇಳೆ ನಟಿ ಜಯಸುಧಾ ಕಮಲ ಬಾವುಟ ಹಿಡಿಯುವ ಸಾಧ್ಯತೆಯೂ ಇದೆ ಎಂದು ಎನ್ನಲಾಗಿತ್ತು. ಆದರೆ, ಆಗಸ್ಟ್ 21ರಂದು ತಾವು ಬಿಜೆಪಿಗೆ ಸೇರುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಮುಂದೆ ಜಯಸುಧಾ ಷರತ್ತು: ಜಯಸುಧಾ ಅವರನ್ನು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಈಟಾಳ ರಾಜೇಂದ್ರ ಭೇಟಿ ಮಾಡಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಜಯಸುಧಾ ಬಿಜೆಪಿಯ ಮುಂದೆ ಕೆಲ ಷರುತ್ತುಗಳನ್ನಿಟ್ಟಿದ್ದಾರೆ. ಇವುಗಳಿಗೆ ಒಪ್ಪಿದರೆ ಪಕ್ಷಕ್ಕೆ ಸೇರುವುದಾಗಿ ತಿಳಿಸಿದ್ದಾರೆ. ಹೀಗಾಗಿಯೇ ಹೈಕಮಾಂಡ್ ಸೂಚನೆಗಾಗಿ ತೆಲಂಗಾಣ ಬಿಜೆಪಿಯ ನಾಯಕರು ಕಾಯುತ್ತಿದ್ದಾರೆ ಎನ್ನಲಾಗಿದೆ.