ಮುಂಬೈ: ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ಕೋವಿಡ್ ತಗುಲಿರುವುದು ವರದಿಯಾಗಿದ್ದು, ಇದೀಗ ನಟಿ ಕಂಗನಾ ರಣಾವತ್ ತಮಗೆ ಸೋಂಕು ಅಂಟಿರುವುದಾಗಿ ದೃಢಪಡಿಸಿದ್ದಾರೆ.
ಹಿಮಾಚಲ ಪ್ರದೇಶಕ್ಕೆ ಬಂದ ಮೇಲೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ವರದಿ ಪಾಸಿಟಿವ್ ಬಂದಿದೆ ಎಂದು ಕಂಗನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
"ಕಳೆದ ಕೆಲವು ದಿನಗಳಿಂದ ನಾನು ದಣಿದಿರುವುದಾಗಿ ಮತ್ತು ದುರ್ಬಲವಾಗಿರುವುದಾಗಿ ಅನ್ನಿಸುತ್ತಿತ್ತು. ಹೀಗಾಗಿ ಹಿಮಾಚಲಕ್ಕೆ ಹೋಗಬೇಕೆಂದು ಆಶಿಸುತ್ತಿದ್ದೆ. ಇಲ್ಲಿಗೆ ಬಂದ ಬಳಿಕ ಪರೀಕ್ಷೆಗೆ ಒಳಗಾದೆ. ರಿಪೋರ್ಟ್ ಪಾಸಿಟಿವ್ ಬಂದಿದೆ. ನಾನೀಗ ಕ್ವಾರಂಟೈನ್ ಆಗಿದ್ದೇನೆ" ಎಂದು ನಟಿ ಹೇಳಿದ್ದಾರೆ.
ಇದನ್ನೂ ಓದಿ: ಕಂಗನಾ ರಣಾವತ್ ಟ್ವಿಟರ್ ಖಾತೆ ರದ್ದು
"ಈ ವೈರಸ್ ನನ್ನ ದೇಹದೊಳಗೆ ಪಾರ್ಟಿ ಮಾಡುತ್ತಿದೆಯೇನೋ, ಆದರೆ ನಾನು ಅದನ್ನು ಹೊಡೆದೋಡಿಸುವೆ. ಯಾವುದೇ ಶಕ್ತಿಗೂ ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ. ನೀವು ಹೆಚ್ಚು ಹೆದರಿದಷ್ಟು, ಅದು ನಿಮ್ಮನ್ನು ಹೆಚ್ಚೆಚ್ಚು ಭಯಪಡಿಸುತ್ತದೆ. ಕೊರೊನಾ, ಇದೊಂದು ಅಲ್ಪಾವಧಿಯ ಜ್ವರವಷ್ಟೆ. ಆದರೆ ಇದು ಮನಸ್ಸಿಗೆ ಹೆಚ್ಚು ಒತ್ತಡ ನೀಡುತ್ತದೆ. ಬನ್ನಿ ಈ ಕೋವಿಡ್ -19 ಅನ್ನು ನಾಶಪಡಿಸೋಣ. ಹರ ಹರ ಮಹಾದೇವ್" ಎಂದು ಜನರಿಗೆ ಕಂಗನಾ ಕರೆ ನೀಡಿದ್ದಾರೆ.