ಹೈದರಾಬಾದ್:ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ಕ್ಷೇತ್ರದ ಉಪಚುನಾವಣೆ ಸಮರ ಜೋರಾಗಿದೆ. ಆಡಳಿತರೂಢ ಟಿಆರ್ಎಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪ್ರಚಾರ ನಡೆಯುತ್ತಿದೆ. ನಿನ್ನೆ ಚುನಾವಣಾ ಪ್ರಚಾರಕ್ಕಾಗಿ ಹೈದ್ರಾಬಾದ್ಗೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಅವರು ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಗೃಹ ಸಚಿವ ಅಮಿತ್ ಶಾ ಮತ್ತು ಜೂನಿಯರ್ ಎನ್ಟಿಆರ್ ಶಂಶಾಬಾದ್ನ ನೊವಾಟೆಲ್ ಹೋಟೆಲ್ನಲ್ಲಿ ಭೇಟಿ ಮಾಡಿದರು. ಈ ವೇಳೆ ರಾಜಕೀಯದ ಕುರಿತಾಗಿ ಮಾತುಕತೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಬಿಜಿಪಿ ಸೇರ್ತಾರ ತಾರಕ್?:ಇನ್ನು ಅಮಿತ್ ಶಾ ಅವರು ಮಾತುಕತೆಯ ವೇಳೆ ಎನ್ಟಿಆರ್ನ್ನು ಪಕ್ಷಕ್ಕೆ ಆಹ್ವಾನಿಸಿದರು ಎಂದು ತಿಳಿದುಬಂದಿದೆ. ಈ ಹಿಂದಿನ ಚುನಾವಣೆಯಲ್ಲಿ ಖ್ಯಾತ ನಟ ತಾರಕ್ ಟಿಡಿಪಿ ಪರ ಪ್ರಚಾರ ನಡೆಸಿದ್ದರು. ಬಳಿಕ ಅವರು ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಅಮಿತ್ ಶಾ ಅವರು ಯುವ ನಟನನ್ನು ಬಿಜೆಪಿಗೆ ಕರೆತರುವ ಒಲವು ಹೊಂದಿದ್ದು, ನಿನ್ನೆಯ ಭೇಟಿಯಲ್ಲಿ ಇದು ಪ್ರಸ್ತಾಪವಾಗಿದೆ ಎಂದು ಹೇಳಲಾಗಿದೆ.
ಇಬ್ಬರು ಸಂಧಿಸಿದ ಫೋಟೋಗಳನ್ನು ಟ್ವೀಟ್ ಮಾಡಿರುವ ಅಮಿತ್ ಶಾ, "ತೆಲುಗಿನ ಅತ್ಯಂತ ಪ್ರತಿಭಾನ್ವಿತ ನಟ ಜೂನಿಯರ್ ಎನ್ಟಿಆರ್ ಅವರನ್ನು ಹೈದರಾಬಾದ್ನಲ್ಲಿ ಭೇಟಿ ಮಾಡಿರುವುದು ಸಂತಸ ತಂದಿದೆ" ಎಂದು ಬರೆದುಕೊಂಡಿದ್ದಾರೆ.
ಓದಿ:ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ.. ಕೆಸಿಆರ್ ವಿರುದ್ಧ ಅಮಿತ್ ಶಾ ವಾಗ್ದಾಳಿ