ನವದೆಹಲಿ:ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬುಧವಾರ ಜಾರಿ ನಿರ್ದೇಶನಾಲಯ (ಇಡಿ)ದ ಮುಂದೆ ಹಾಜರಾಗಿದ್ದಾರೆ. ವಂಚಕ ಚಂದ್ರಶೇಖರ್ ವಿರುದ್ಧ ಇಡಿ ತನಿಖೆ ನಡೆಸುತ್ತಿರುವ 200 ಕೋಟಿ ರೂ.ಗೂ ಅಧಿಕ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಟಿಯನ್ನು ಇಡಿ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಮೂರು ಬಾರಿ ಸಮನ್ಸ್ ತಿರಸ್ಕರಿಸಿ ವಿಚಾರಣೆಗೆ ಗೈರಾಗಿದ್ದ ನಟಿ, ಇಂದು ಮಧ್ಯಾಹ್ನ 3:30ರ ಸುಮಾರಿಗೆ ಇಡಿ ಮುಂದೆ ಹಾಜರಾಗಿದ್ದಾರೆ. ಫರ್ನಾಂಡಿಸ್(36), ಆಗಸ್ಟ್ನಲ್ಲಿ ಒಮ್ಮೆ ಇಡಿ ಮುಂದೆ ಹಾಜರಾಗಿದ್ದರು ಮತ್ತು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಯ ನಿಬಂಧನೆಗಳ ಅಡಿಯಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ್ ಮತ್ತು ಅವರ ಪತ್ನಿ ನಟಿ ಲೀನಾ ಮರಿಯಾ ಪಾಲ್ ಅವರ ಬಗ್ಗೆ ಮತ್ತಷ್ಟು ಶೋಧಿಸಲು ಜಾಕ್ವೆಲಿನ್ ಹೇಳಿಕೆಯನ್ನು ದಾಖಲಿಸಲು ಇಡಿ ಮುಂದಾಗಿದೆ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಫರ್ನಾಂಡಿಸ್‌ಗೆ ಸಂಬಂಧಿಸಿರುವ ಹಣ ಮತ್ತು ವಹಿವಾಟುಗಳ ಕೆಲವು ಜಾಡುಗಳ ಬಗ್ಗೆ ತಿಳಿದುಕೊಳ್ಳಲು ಸಂಸ್ಥೆ ಬಯಸಿದೆ ಎಂದು ಅವರು ಹೇಳಿದರು.
ಈಗಾಗಲೇ ಹೇಳಿಕೆ ದಾಖಲಿಸಿರುವ ನಟಿ ಫತೇಹಿ
ಮತ್ತೋರ್ವ ಬಾಲಿವುಡ್ ನಟಿ ಮತ್ತು ಡ್ಯಾನ್ಸ್ರ್ ನೋರಾ ಫತೇಹಿ (29), ಈ ಪ್ರಕರಣದಲ್ಲಿ ಕಳೆದ ವಾರ ಇಡಿ ಎದುರು ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ.ಫತೇಹಿ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೋರ್ಟಿಸ್ ಹೆಲ್ತ್‌ಕೇರ್ ಮಾಜಿ ಪ್ರಮೋಟರ್ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಕೆಲವು ಹೈ ಪ್ರೊಫೈಲ್ ಜನರನ್ನು ವಂಚಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಈಗಾಗಲೇ ಸ್ಥಳೀಯ ಜೈಲಿನಲ್ಲಿ ಇರಿಸಿದ್ದ ಚಂದ್ರಶೇಖರ್ ಮತ್ತು ಪೌಲ್ ಅವರನ್ನು ಇಡಿ ಇತ್ತೀಚೆಗೆ ಬಂಧಿಸಿತ್ತು.
ಆಗಸ್ಟ್ ನಲ್ಲಿ ಇಡಿ ಚಂದ್ರಶೇಖರ್ ಅವರ ಕೆಲವು ನಿವೇಶನಗಳ ಮೇಲೆ ದಾಳಿ ಮಾಡಿ ಚೆನ್ನೈನಲ್ಲಿನ ಬಂಗಲೆ ಮೇಲೆಯೂ ದಾಳಿ ನಡೆಸಿ 82.5 ಲಕ್ಷ ರೂ ನಗದು ಮತ್ತು 12 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿತ್ತು.
"ಚಂದ್ರಶೇಖರ್ ಈ ವಂಚನೆಯ ಸೂತ್ರಧಾರ. ಅವನು 17 ನೇ ವಯಸ್ಸಿನಿಂದಲೂ ಕ್ರೈಂ ದುನಿಯಾದ ಭಾಗವಾಗಿದ್ದಾನೆ. ಆತನ ವಿರುದ್ಧ ಅನೇಕ ಎಫ್ಐಆರ್ ದಾಖಲಾಗಿವೆ. ಪ್ರಸ್ತುತ ರೋಹಿಣಿ ಜೈಲಿನಲ್ಲಿ (ದೆಹಲಿ ಪೋಲಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ)" ಇದ್ದಾನೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನಲ್ಲಿದ್ದರೂ ಜನರನ್ನು ವಂಚಿಸುವುದನ್ನು ಮಾತ್ರ ಚಂದ್ರಶೇಖರ್ ಬಿಟ್ಟಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.