ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಪದೇ ಪದೆ ಕೇಳಿಬರುತ್ತಿವೆ. ಕಿರುತೆರೆ ಮತ್ತು ವೆಬ್ಸೀರಿಸ್ಗಳಲ್ಲಿ ಮಿಂಚುತ್ತಿರುವ ನಟಿ ಕುಬ್ರಾ ಸೇಠ್ ಕೂಡ ತಾವು 17ನೇ ವಯಸ್ಸಿಗೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ.
ಸೇಕ್ರೆಡ್ ಗೇಮ್ಸ್ ಮೂಲಕ ಖ್ಯಾತಿಗೆ ಬಂದ ನಟಿ ಕುಬ್ರಾ ಸೇಠ್ ಅವರು 'ಓಪನ್ ಬುಕ್: ನಾಟ್ ಫುಲ್ ಎ ಮೆಮೊಯಿರ್' ಎಂಬ ಹೊಸ ಪುಸ್ತಕದಲ್ಲಿ 'ಅಂಕಲ್' ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿಯಿಂದ ತಾವು ಲೈಂಗಿಕವಾಗಿ ಶೋಷಣೆಗೆ ಒಳಗಾದ ಬಗ್ಗೆ ಪ್ರಸ್ತಾಪಿಸಿದ್ದಾರೆ.
ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬ ಆರ್ಥಿಕವಾಗಿ ಜರ್ಝರಿತವಾಗಿತ್ತು. ಆಗ ನಮ್ಮ ಕುಟುಂಬದ ಆಪ್ತರೊಬ್ಬರು ನಮಗೆ ಹಣದ ಸಹಾಯ ಮಾಡಿದ್ದರು. ಇದರಿಂದಾಗಿ ಅವರು ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ನಾನು ಅವರನ್ನು ಅಂಕಲ್ ಎಂದು ಕರೆಯುತ್ತಿದ್ದೆ. ಅವರು ಬೆಂಗಳೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಮನೆಗೆ ಬರುತ್ತಿದ್ದ ಅವರು ನನ್ನ ಕುತ್ತಿಗೆಗೆ ಮುದ್ದಿಸುತ್ತಿದ್ದರು. ಈ ವೇಳೆ ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ಗೊತ್ತಾಗದೇ ಸುಮ್ಮನಿರುತ್ತಿದ್ದೆ. ಅವರು ಮನೆಗೆ ಬಂದಾಗಲೆಲ್ಲಾ ಚುಂಬಿಸುತ್ತಿದ್ದರು. ಒಂದು ದಿನ ನನ್ನ ತುಟಿಗೇ ಮುತ್ತಿಕ್ಕಿದ್ದರು. ಇದರಿಂದ ನಾನು ಆಘಾತಕ್ಕೊಳಗಾದೆ. ಇದನ್ನು ಪ್ರತಿರೋಧಿಸುವ ಸ್ಥಿತಿಯಲ್ಲೂ ನಾನಿರಲಿಲ್ಲ. ಕಾರಣ ಅವರು ನನ್ನ ಕುಟುಂಬಕ್ಕೆ ಹಣಕಾಸಿನ ನೆರವು ನೀಡಿದ್ದರು.