ಬೆಂಗಳೂರು:ಭಾರತದಿಂದ ಹೊರ ಹೋಗದಂತೆ ಮಾಜಿ ಪತ್ರಕರ್ತ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆಕಾರ್ ಪಟೇಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಕಾರ್ ಪಟೇಲ್ 'ನಾನು ಈಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದು, ಭಾರತದಿಂದ ಹೊರಹೋಗುವುದನ್ನು ನಿಲ್ಲಿಸಿದ್ದೇನೆ. ನಾನು ನಿರ್ಗಮನ ನಿಯಂತ್ರಣ ಲಿಸ್ಟ್ನಲ್ಲಿದ್ದೇನೆ. ಯುಎಸ್ ಪ್ರವಾಸಕ್ಕಾಗಿ ನ್ಯಾಯಾಲಯದ ಆದೇಶದ ಮೂಲಕ ಪಾಸ್‌ಪೋರ್ಟ್ ಮರಳಿ ಪಡೆದಿದ್ದೇನೆ.
ಮಾನವ ಹಕ್ಕುಗಳ ಹೋರಾಟಗಾರ ಆಕಾರ್ ಪಟೇಲ್ಗೆ ಭಾರತ ತೊರೆಯದಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆ - ಆಕಾರ್ ಪಟೇಲ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆ
ಮಾನವ ಹಕ್ಕುಗಳ ಹೋರಾಟಗಾರ ಆಕಾರ್ ಪಟೇಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದ್ದು, ಈ ಕುರಿತು ಸ್ವತಃ ಆಕಾರ್ ಪಟೇಲ್ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ಸಿಬಿಐ ನನ್ನನ್ನು ಏಕೆ ಪಟ್ಟಿಗೆ ಸೇರಿಸಿಕೊಂಡಿದೆ? ಎಂದು ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ. ಇದರ ಜೊತೆಗೆ ಪ್ರಧಾನಮಂತ್ರಿ ಕಚೇರಿಯನ್ನು ಟ್ಯಾಗ್ ಮಾಡಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ವಿರುದ್ಧ ಮೋದಿ ಸರ್ಕಾರ ದಾಖಲಿಸಿರುವ ಪ್ರಕರಣದಿಂದಾಗಿ ನಾನು ಲುಕ್‌ಔಟ್ ಸುತ್ತೋಲೆಯಲ್ಲಿದ್ದೇನೆ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಆಕಾರ್ ಪಟೇಲ್ ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ.
ಜೂನ್ 2, 2020ರಂದು ಆಕಾರ್ ಪಟೇಲ್ ಅವರ ವಿರುದ್ಧ ಒಂದು ಪ್ರಕರಣ ದಾಖಲಾಗಿತ್ತು. ಅಮೆರಿಕದಲ್ಲಿ ಜಾರ್ಜ್ ಫ್ಲೋಯ್ಡ್ ಸಾವಿನ ನಂತರ ಭಾರಿ ಪ್ರತಿಭಟನೆಗಳು ನಡೆದಿದ್ದು, ಭಾರತದಲ್ಲಿ ಅಂಚಿನಲ್ಲಿರುವ ಸಮುದಾಯಗಳಿಗೂ ಇಂಥಹ ಪ್ರತಿಭಟನೆಯ ಅಗತ್ಯವಿದೆ ಎಂದು ಪಟೇಲ್ ಟ್ವೀಟ್ ಮಾಡಿದ್ದರು. ಸೆಕ್ಷನ್ 117 (ಸಾರ್ವಜನಿಕರಿಂದ ಅಥವಾ ಹತ್ತಕ್ಕೂ ಹೆಚ್ಚು ವ್ಯಕ್ತಿಗಳಿಂದ ಅಪರಾಧಕ್ಕೆ ಕುಮ್ಮಕ್ಕು ನೀಡುವುದು), ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆಯನ್ನು ನೀಡುವುದು) ಮತ್ತು 505-1-ಬಿ ( ಸಾರ್ವಜನಿಕರಲ್ಲಿ ಭಯ ಉಂಟುಮಾಡುವುದು) ಮುಂತಾದ ಸೆಕ್ಷನ್ಗಳ ಅಡಿಯಲ್ಲಿ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.