ನವದೆಹಲಿ : ಭಾರತದಲ್ಲಿ ಮತ್ತೆ ಕೋವಿಡ್ ವೈರಸ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. ಕಳೆದೊಂದು ದಿನದಲ್ಲಿ ಬರೋಬ್ಬರಿ 5,880 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 35,199 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 14 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,30,979 ಕ್ಕೆ ತಲುಪಿದೆ. ದೆಹಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ನಾಲ್ವರು ಹಾಗೂ ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ರಾಜಸ್ಥಾನದಿಂದ ತಲಾ ಒಬ್ಬಬ್ಬರು ಮೃತಪಟ್ಟಿದ್ದು, ಕೇರಳದಿಂದ ಎರಡು ಮಂದಿ ಮೃತಪಟ್ಟಿರುವುದಾಗಿ ಇಂದು ಬೆಳಗ್ಗೆ ನವೀಕರಿಸಲಾದ ಡೇಟಾದಲ್ಲಿ ತಿಳಿಸಲಾಗಿದೆ. ಇನ್ನು ಕಳೆದೊಂದು ದಿನದಲ್ಲಿ ಪತ್ತೆಯಾದ ಸೋಂಕಿತರು ಸೇರಿದಂತೆ ಇದುವರೆಗೆ 4.47 ಕೋಟಿಗೆ (4,47,62,496) ಮಂದಿಗೆ ಸೋಂಕು ತಗುಲಿದೆ.
ದೇಶದಲ್ಲಿ ಸದ್ಯಕ್ಕೆ ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.73 ಪ್ರತಿಶತದಷ್ಟು ದಾಖಲಾಗಿದೆ. ಸಾವಿನ ಪ್ರಮಾಣ ಶೇ 1.19 ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಶೇಕಡಾ 6.91 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇಕಡಾ 3.67 ಇದೆ. ಇದುವರೆಗೂ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,41,96,318 ಕ್ಕೆ ತಲುಪಿದೆ. ಕೇಂದ್ರ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಒಟ್ಟು 205 ಡೋಸ್ ಲಸಿಕೆ ನೀಡಲಾಗಿದೆ. ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 (220,66,23,527 ) ಕೋಟಿ ಕೋವಿಡ್ ಲಸಿಕಾ ಡೋಸ್ ನೀಡಲಾಗಿದೆ.
ಕೊರೊನಾ ಪ್ರಕರಣಗಳು ಅಧಿಕವಾಗುತ್ತಿರುವುದರಿಂದ ಏಪ್ರಿಲ್ 10 ಮತ್ತು 11 ರಂದು ( ಇಂದು, ನಾಳೆ) ರಾಷ್ಟ್ರವ್ಯಾಪಿ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಅಣಕು ಪರೀಕ್ಷೆ ಮೇಲ್ವಿಚಾರಣೆ ಮಾಡಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಏಪ್ರಿಲ್ 10 ರಂದು ಜಜ್ಜರ್‌ನ ಏಮ್ಸ್‌ಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಣಕು ಪರೀಕ್ಷೆ ನಡೆಯಲ್ಲಿ ಆಸ್ಪತ್ರೆಗಳಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆ, ಔಷಧಗಳು, ಸಿಬ್ಬಂದಿಯ ಲಭ್ಯತೆ, ಸೋಂಕು ನಿರ್ವಹಣೆಯ ಕಾರ್ಯವೈಖರಿ ಕುರಿತು ತೋರಿಸಲಾಗುವುದು.
ಇನ್ನು ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೋವಿಡ್ ವೈರಸ್ ನಿರ್ವಹಣೆ ಮಾಡಲು ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪಂಚ ಸೂತ್ರ ಅನುಸರಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ, ಐಸಿಯು, ವೆಂಟಿಲೇಟರ್, ಆಕ್ಸಿಜನ್, ಔಷಧ ಮತ್ತು ಸಿಬ್ಬಂದಿಗಳ ಲಭ್ಯತೆ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ಇಂದು ಮತ್ತು ನಾಳೆ ನಡೆಯುತ್ತಿರುವ ಮಾಕ್ ಡ್ರಿಲ್ ರಾಜ್ಯಗಳ ಆರೋಗ್ಯ ಸಚಿವರು, ಇಲಾಖೆ ಅಧಿಕಾರಿಗಳು, ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.
ಇದನ್ನೂ ಓದಿ:ಕೋವಿಡ್ ಮನುಷ್ಯರಿಂದಲೇ ಹುಟ್ಟಿಕೊಂಡಿರಬಹುದು ಎಂದ ಚೀನಾದ ವಿಜ್ಞಾನಿ
ಇನ್ನೊಂದೆಡೆ, ಕೋವಿಡ್-19 ಹುಟ್ಟಿಕೊಂಡು 3 ವರ್ಷಗಳಾದ್ರು ಕೂಡ ಸೋಂಕಿನ ಮೂಲ ನಿಗೂಢವಾಗಿದೆ. ಆರಂಭದಲ್ಲಿ ಕೊರೊನಾ ವೈರಸ್ ಬಾವಲಿಗಳಿಂದ ಬಂದಿದೆ ಎನ್ನಲಾಯ್ತು. ಬಳಿಕ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಜಾಗತಿಕವಾಗಿ ಚರ್ಚೆಯಾಗಿತ್ತು. ನಂತರ ಮಾರಣಾಂತಿಕ ಸೋಂಕು ಚೀನಾದ ವುಹಾನ್ ಪ್ರಾಂತದ ಸಮುದ್ರ ಖಾದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ರಕೂನ್ ತಳಿಯ ನಾಯಿಗಳಿಂದ ಹರಡಿರುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ವೈರಸ್ ತಜ್ಞರ ತಂಡ ವರದಿ ಮಾಡಿತ್ತು. ಆದರೆ, ಇದೀಗ ಕೋವಿಡ್ ವೈರಸ್ ಮನುಷ್ಯರಿಂದ ಹುಟ್ಟಿಕೊಂಡಿರಬಹುದು ಎಂದು ಚೀನಾದ ವಿಜ್ಞಾನಿಯೊಬ್ಬರು ಹೇಳಿದ್ದಾರೆ ಅಂತಾ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.